ಚಂಡೀಗಢ: ಈ ವರ್ಷಾಂತ್ಯದಲ್ಲಿ ನಡೆಯಲಿರುವ 90 ಸದಸ್ಯ ಬಲದ ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ 2,556 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಮುಖಂಡರು ತಮ್ಮ ಶಾಸಕರ ಆಯ್ಕೆಗೆ ಆಂತರಿಕ ಸಮೀಕ್ಷೆಯ ಮೊರೆ ಹೋಗಿದೆ.
ಕರ್ನಾಲ್ ಜಿಲ್ಲೆಯ ನಿಲೋಖೇರಿ (ಮೀಸಲಾತಿ) ಕ್ಷೇತ್ರದಿಂದ ಪಕ್ಷದ ಅತಿ ಹೆಚ್ಚು 88 ಅಭ್ಯರ್ಥಿಗಳು ಮತ್ತು ಜೂಲಾನಾಗೆ 86 ಟಿಕೆಟ್ ಆಕಾಂಕ್ಷಿಗಳು ಇದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಶಾಸಕರು, ಮಾಜಿ ಶಾಸಕರು, ರಾಜಕೀಯ ನಾಯಕರ ಬಂಧುಗಳು, ವಕೀಲರು, ವೈದ್ಯರು, ನಿವೃತ್ತ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಕರು, ಕೆಲವು ಪತ್ರಕರ್ತರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿತ್ತು. ರೋಹ್ಟಕ್ ಸಂಸದ ದೀಪೇಂದರ್ ಹೂಡಾ ನೇತೃತ್ವದಲ್ಲಿ ಕಾಂಗ್ರೆಸ್ 'ಹರಿಯಾಣ ಮಾಂಗೆ ಹಿಸಾಬ್' ಪ್ರಚಾರವನ್ನು ಹೆಚ್ಚಿಸುತ್ತಿದೆ.
ಅಭ್ಯರ್ಥಿ ಆಯ್ಕೆಯಲ್ಲಿ ತನ್ನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಭಾನುವಾರ, ರಾಜ್ಯದ ಪಕ್ಷದ ಪದಾಧಿಕಾರಿಗಳು ತಮ್ಮ ಶಾಸಕ ಅಭ್ಯರ್ಥಿಗಳ ಆಯ್ಕೆಗೆ ಮತ ಚಲಾಯಿಸಿದರು. ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಂದ ಸೂಕ್ತ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದರಿಂದ ಪಕ್ಷದೊಳಗೆ ಒಲವು ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸಲು ಆಂತರಿಕ ಸಮೀಕ್ಷೆ ಸಮೀಕ್ಷೆ ನಡೆಸಲಾಗುವುದು, ಸಮೀಕ್ಷೆ ಫಲಿತಾಂಶದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಿಇಸಿ ರಾಜೀವ್ ಕುಮಾರ್ ನೇತೃತ್ವದ ಮೂರು ಸದಸ್ಯರ ಚುನಾವಣಾ ಆಯೋಗದ ತಂಡವು ಆಗಸ್ಟ್ 12 ಮತ್ತು 13 ರಂದು ಚಂಡೀಗಢಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಹರಿಯಾಣ ವಿಧಾನಸಭೆಯ ಅವಧಿ ನವೆಂಬರ್ 3 ರಂದು ಮುಕ್ತಾಯಗೊಳ್ಳಲಿದೆ.
Advertisement