ಉದ್ದಂಪುರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿಗೆ ಉಗ್ರರ ಒಳನುಸುಳುವಿಕೆ ಪ್ರಕರಣ ಹೆಚ್ಚಾಗುತ್ತಿದ್ದು, ಸೋಮವಾರ ಉಗ್ರರ ದಾಳಿಯಲ್ಲಿ ಓರ್ವ ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಹುತಾತ್ಮರಾಗಿದ್ದಾರೆ.
ಉದ್ದಂಪುರ ಜಿಲ್ಲೆಯಲ್ಲಿ ಗಸ್ತು ಪಡೆಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸಂತ್‌ಗಢದ ದುಡು ಪ್ರದೇಶದಲ್ಲಿ ಮಧ್ಯಾಹ್ನ 3:30 ರ ಸುಮಾರಿನಲ್ಲಿ ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಇದರಿಂದ 187ನೇ ಬೆಟಾಲಿಯನ್‌ಗೆ ಸೇರಿದ ಸಿಆರ್‌ಪಿಎಫ್‌ನ ಇನ್ಸ್‌ಪೆಕ್ಟರ್‌ಗೆ ಗುಂಡು ತಗುಲಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹುತಾತ್ಮರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಂಟಿ ಗಸ್ತು ತಂಡ ಬಲವಾದ ಪ್ರತೀಕಾರದ ಮೂಲಕ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತಷ್ಟು ಸೇನೆ ಸ್ಥಳಕ್ಕೆ ಧಾವಿಸಿದ್ದು, ಉಗ್ರರನ್ನು ಪತ್ತೆ ಹಚ್ಚಿ, ಹೊಡೆದುರುಳಿಸಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement