
ಚೆನ್ನೈ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನರಾಗಿದ್ದಾರೆ. ವಯೋಸಹಜ ಕಾರಣದಿಂದ ಬಳಲುತ್ತಿದ್ದ ಅವರು ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ಸೋಮವಾರ ತಿಳಿಸಿವೆ.
ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಸೆಪ್ಟೆಂಬರ್ 30, 2000 ರಿಂದ 31 ಡಿಸೆಂಬರ್ 31, 2002 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಜನರಲ್ ಪದ್ಮನಾಭನ್ ಅವರು ಪತ್ನಿ, ಪುತ್ರಿ ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.
ಪದ್ಮನಾಭನ್ ಅವರ ಮಕ್ಕಳು ಇಂದು ರಾತ್ರಿ ಅಮೆರಿಕದಿಂದ ಆಗಮಿಸಲಿದ್ದು, ನಾಳೆ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. 15 ಕಾರ್ಪ್ಸ್ ಕಮಾಂಡರ್ ಆಗಿ ಅವರ ಸೇವೆಯನ್ನು ಗುರುತಿಸಿ ಅತಿ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿತ್ತು.
ಡಿಸೆಂಬರ್ 5, 1940 ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದ ಜನರಲ್ ಪದ್ಮನಾಭನ್ ಅವರು ಡೆಹ್ರಡೂನ್ ನ ಪ್ರತಿಷ್ಠಿತ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ಮತ್ತು ಪುಣೆ ಖಡಕವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದರು.
ಅವರ ವೃತ್ತಿಜೀವನದಲ್ಲಿ ಹಲವಾರು ಪ್ರತಿಷ್ಠಿತ ಕಮಾಂಡ್, ಸಿಬ್ಬಂದಿ ಮತ್ತು ನಿರ್ದೇಶನಾತ್ಮಾಕ ಹುದ್ದೆಗಳ ಜೊತೆಗೆ ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಸುಂದರರಾಜನ್ ಪದ್ಮನಾಭನ್ ಅವರ ಪಾರ್ಥಿವ ಶರೀರಕ್ಕೆ ತಮಿಳುನಾಡು ಮುಖ್ಯಮಂತ್ರಿ ಆರ್ ಎನ್ ರವಿ ಅಂತಿಮ ನಮನ ಸಲ್ಲಿಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತೀವ್ರ ಸಂತಾಪ ಸೂಚಿಸಿದ್ದಾರೆ.
Advertisement