ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್(ಎನ್ ಸಿ) ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಹಾಗೂ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರ ಮರುಸ್ಥಾಪನೆ ಸೇರಿದಂತೆ 12 ಗ್ಯಾರಂಟಿಗಳನ್ನು ಘೋಷಿಸಿದೆ.
ಜೂನ್ 2000 ರಲ್ಲಿ, ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವು ರಾಜ್ಯದಲ್ಲಿ 1953 ರ ಹಿಂದಿನ ಸಾಂವಿಧಾನಿಕ ಸ್ಥಾನಮಾನವನ್ನು ಪುನಃಸ್ಥಾಪಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತು.
ಆದರೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇದನ್ನು ತಿರಸ್ಕರಿಸಿತ್ತು. ನರೇಂದ್ರ ಮೋದಿ ಸರ್ಕಾರವು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ಕಣಿವೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
ಈಗ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಎನ್‌ಸಿ ಇಂದು ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎನ್ ಸಿ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಮತ್ತು ಕಾಶ್ಮೀರಿ ಪಂಡಿತರನ್ನು ಕಣಿವೆಗೆ ಘನತೆಯಿಂದ ಹಿಂದಿರುಗಿಸುವುದಾಗಿ ಭರವಸೆ ನೀಡಿದೆ.
200 ಯೂನಿಟ್ ಉಚಿತ ವಿದ್ಯುತ್, ವಿದ್ಯುತ್ ಮತ್ತು ನೀರಿನ ಬಿಕ್ಕಟ್ಟಿಗೆ ಪರಿಹಾರ, ಜಮ್ಮು ಮತ್ತು ಕಾಶ್ಮೀರಕ್ಕೆ ಜಲ-ವಿದ್ಯುತ್ ವಿದ್ಯುತ್ ಯೋಜನೆಗಳ ವರ್ಗಾವಣೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರತಿ ವರ್ಷ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಎನ್ ಸಿ ಭರವಸೆ ನೀಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪಕ್ಷವು ಜಾರಿಗೊಳಿಸಬಹುದಾದ ಭರವಸೆಗಳನ್ನು ಮಾತ್ರ ನೀಡುತ್ತಿದೆ. ಈ ಪ್ರಣಾಳಿಕೆಯು ಎನ್‌ಸಿಯ ವಿಷನ್ ಡಾಕ್ಯುಮೆಂಟ್ ಮತ್ತು ಆಡಳಿತದ ಮಾರ್ಗಸೂಚಿಯಾಗಲಿದೆ ಎಂದು ಅವರು ವಿವರಿಸಿದರು.
Advertisement