ಕೃಷ್ಣಗಿರಿ: ನಕಲಿ NCC ಶಿಬಿರದಲ್ಲಿ 8ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬರಗೂರಿನಲ್ಲಿ ನಡೆದಿದೆ. ಈ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಸರಯು ಸೋಮವಾರ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಎನ್ ಸಿಸಿ ಶಿಬಿರ ಆಯೋಜಿಸಿರಲಿಲ್ಲ. ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆಯಲ್ಲಿ ತೊಡಗಿರುವ ವ್ಯಕ್ತಿಗಳು ಎನ್ ಸಿಸಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು NCC ಪ್ರಧಾನ ಕಚೇರಿ ಹೇಳಿದೆ.
ಜಿಲ್ಲಾಡಳಿತ ಕೂಡಾ NCC ಯಾವುದೇ ಶಿಬಿರ ಆಯೋಜಿಸಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದು, ಕ್ಷೀಪ್ರಗತಿಯಲ್ಲಿ ಕ್ರಮ ಕೈಗೊಂಡು ಭಾನುವಾರ 9 ಜನರನ್ನು, ಇಂದು ಉಳಿದವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸಮಾಲೋಚನೆ ನಡೆಸಿ, ಮಾನಸಿಕವಾಗಿ ಬೆಂಬಲ ನೀಡಿದ್ದು, ಈ ಹಿಂದೆ ನಡೆದಿರುವ ಇಂತಹ ನಕಲಿ ಶಿಬಿರಗಳ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ವಿಸ್ತೃತಾ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ವಾರದ ಹಿಂದೆ ನಡೆದ ನಕಲಿ ಎನ್ ಸಿಸಿ ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ ಸುಮಾರು 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಬಾಲಕಿ ತನ್ನ ಪೋಷಕರೊಂದಿಗೆ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement