ನವದಹೆಲಿ: ವ್ಯಾಪಾರ, ಹೂಡಿಕೆ, ರಕ್ಷಣೆ, ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ತೀವ್ರ ಚರ್ಚೆಯ ನಂತರ ಭಾರತ ಮತ್ತು ಮಲೇಷ್ಯಾ ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ನವೀಕರಿಸಲು ನಿರ್ಧರಿಸಿವೆ.
ಉಭಯ ದೇಶಗಳು ಕನಿಷ್ಠ ಎಂಟು ಒಪ್ಪಂದಗಳಿಗೆ ಸಹಿ ಹಾಕಿವೆ. ಅವುಗಳಲ್ಲಿ ಒಂದು ಮಲೇಷ್ಯಾದಲ್ಲಿ ಭಾರತೀಯ ಕಾರ್ಮಿಕರ ನೇಮಕಾತಿಯನ್ನು ಉತ್ತೇಜಿಸಲು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಸಂಬಂಧಿಸಿದ ಒಪ್ಪಂದವಾಗಿದೆ. ಇಬ್ರಾಹಿಂ ಅವರು ಮೂರು ದಿನಗಳ ಭಾರತ ಪ್ರವಾಸದ ಅಂಗವಾಗಿ ಸೋಮವಾರ ರಾತ್ರಿ ದೆಹಲಿಗೆ ಆಗಮಿಸಿದ್ದರು. ಪ್ರಧಾನಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ಮೋದಿ, ಭಾರತ-ಮಲೇಷ್ಯಾ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಕಾರ್ಮಿಕರ ಉದ್ಯೋಗ ಒಪ್ಪಂದವು ಭಾರತೀಯರ ನೇಮಕಾತಿಯನ್ನು ಉತ್ತೇಜಿಸುತ್ತದೆ. ಅವರ ಹಿತಾಸಕ್ತಿಗಳನ್ನು ಸಹ ರಕ್ಷಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತ-ಮಲೇಷ್ಯಾ ಆರ್ಥಿಕ ಸಂಬಂಧಗಳ ಮಹತ್ವವನ್ನು ಎತ್ತಿ ಹಿಡಿದ ಮೋದಿ, ದ್ವಿಪಕ್ಷೀಯ ವ್ಯಾಪಾರವನ್ನು ರೂಪಾಯಿ ಮತ್ತು ಮಲೇಷ್ಯಾ ಕರೆನ್ಸಿ ರಿಂಗಿಟ್‌ನಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು. ಆರ್ಥಿಕ ಸಹಕಾರದಲ್ಲಿ ಇನ್ನೂ ಸಾಕಷ್ಟು ಅವಕಾಶವಿದೆ ಎಂದು ನಾವು ನಂಬುತ್ತೇವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಬೇಕು. ಅರೆವಾಹಕ, ಫಿನ್‌ಟೆಕ್, ರಕ್ಷಣಾ ಉದ್ಯಮ, ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್‌ನಂತಹ ಹೊಸ ತಾಂತ್ರಿಕ ಕ್ಷೇತ್ರಗಳಲ್ಲಿ ನಾವು ಪರಸ್ಪರ ಸಹಕಾರವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. ಭಾರತ ಮತ್ತು ಮಲೇಷ್ಯಾ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಪರಿಶೀಲನೆಯನ್ನು ತ್ವರಿತಗೊಳಿಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ ಅನ್ನು ಮಲೇಷ್ಯಾದ ಪೇನೆಟ್‌ನೊಂದಿಗೆ ಜೋಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಎರಡೂ ದೇಶಗಳು ಒಂದೇ ಧೋರಣೆ ಹೊಂದಿವೆ ಎಂದು ಮೋದಿ ಹೇಳಿದರು. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಲೇಷ್ಯಾ ಭಾರತದ ಪ್ರಮುಖ ಪಾಲುದಾರ ಎಂದು ಮೋದಿ ಬಣ್ಣಿಸಿದರು. ಭಾರತ ಮತ್ತು ಆಸಿಯಾನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪರಿಶೀಲನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ನಾವು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದರು.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಮೋದಿ, ನಾವು ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಹಡಗುಗಳು ಮತ್ತು ವಿಮಾನಗಳ ಮುಕ್ತ ಸಂಚಾರಕ್ಕೆ ಬದ್ಧರಾಗಿದ್ದೇವೆ. ಎಲ್ಲಾ ವಿವಾದಗಳ ಶಾಂತಿಯುತ ಪರಿಹಾರವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿದರು. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಸೇನೆಯ ಪ್ರಚೋದನಕಾರಿ ಕೃತ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾರತ ಮತ್ತು ಮಲೇಷ್ಯಾ ರಕ್ಷಣಾ ವಲಯದಲ್ಲಿ ಸಹಕಾರದ ಹೊಸ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಿದವು. ಡಿಜಿಟಲ್ ಕೌನ್ಸಿಲ್ ಸ್ಥಾಪಿಸಲು ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕಾರಕ್ಕಾಗಿ ಸ್ಟಾರ್ಟ್ ಅಪ್ ಮೈತ್ರಿ ಮಾಡಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿವೆ.
ಎರಡೂ ದೇಶಗಳ ನಡುವಿನ ಸ್ನೇಹದ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವ ಎಲ್ಲಾ ಸೂಕ್ಷ್ಮ ಅಥವಾ ಅಂತಹುದೇ ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಇಬ್ರಾಹಿಂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತವು ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊಂದಿರುವ ಶ್ರೇಷ್ಠ ರಾಷ್ಟ್ರವಾಗಿದೆ. ಇದು ಹಲವು ವಿಧಗಳಲ್ಲಿ ಬಹು-ಸಾಂಸ್ಕೃತಿಕ ಮತ್ತು ಬಹು-ಧರ್ಮದ ದೇಶವಾಗಿದೆ. 'ಆದ್ದರಿಂದ, ವ್ಯಾಪಾರ ಮತ್ತು ಹೂಡಿಕೆಯನ್ನು ಮೀರಿ, ನಮ್ಮಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಎಂದರು.
ಮೋದಿ ಮತ್ತು ಇಬ್ರಾಹಿಂ ನಡುವಿನ ಮಾತುಕತೆಯಲ್ಲಿ, ಮಲೇಷ್ಯಾದ ತುಂಕು ಅಬ್ದುಲ್ ರೆಹಮಾನ್ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇದಲ್ಲದೆ, ಮಲಯನ್ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಯಿತು.
Advertisement