ಕಡಪ: ಸೈಕಲ್ ನಲ್ಲಿ ಬರುತ್ತಿದ್ದ ಮಕ್ಕಳಿಗೆ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಒಂದು ಮಗು ಸಾವನ್ನಪ್ಪಿ ಮತ್ತೊಂದು ಮಗು ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಕಡಪದ ಅಗಡಿ ಬೀದಿಯಲ್ಲಿ ಈ ಘಟನೆ ಬುಧವಾರ ನಡೆದಿದ್ದು, ಮಧ್ಯಾಹ್ನ ತನ್ವೀರ್ (11) ಮತ್ತು ಆದಂ (10) ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದರು. ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ವಿದ್ಯುತ್ ತಂತಿ ತಗುಲಿದ್ದು ಈ ವೇಳೆ ತನ್ವೀರ್ ಎಂಬ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ವಿದ್ಯಾರ್ಥಿ ಆದಂ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿರುವ ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಕಡಪ ಶಾಸಕಿ ಮಾಧವಿ ರೆಡ್ಡಿ ಆಸ್ಪತ್ರೆಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತೈಸಿದ್ದಾರೆ. ವಿದ್ಯುತ್ ಅಧಿಕಾರಿಗಳ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಸಚಿವ ನಾರಾ ಲೋಕೇಶ್ ಆಘಾತ ವ್ಯಕ್ತಪಡಿಸಿದ್ದಾರೆ. ಅಂತೆಯೇ ಬಾಲಕನ ಸಾವು ಅತೀವ ನೋವು ತಂದಿದೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂತೆಯೇ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಮತ್ತೋರ್ವ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ.
Advertisement