ನವದೆಹಲಿ: ಪ್ರತಿ ವಿಷಯದಲ್ಲೂ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಹೊಡೆದು ಹಾಕುವ ಪ್ರವೃತ್ತಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೊನೆಗೊಳ್ಳುತ್ತಿಲ್ಲ. ಮಧ್ಯಪ್ರದೇಶದ ಛತ್ತರ್‌ಪುರ ಘಟನೆಯ ನಂತರ, ಈಗ ವಿರೋಧ ಪಕ್ಷ ಕಾಂಗ್ರೆಸ್ ಬುಲ್ಡೋಜರ್ ನ್ಯಾಯ ವಿರುದ್ಧ ಕಿಡಿಕಾರಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬುಲ್ಡೋಜರ್ ಸಂಸ್ಕೃತಿ ವಿರುದ್ಧ ಮಾತನಾಡಿದ್ದು ಇದು ನ್ಯಾಯವಲ್ಲ ಅನಾಗರಿಕತೆಯ ಪರಮಾವಧಿ ಎಂದು ಹೇಳಿದ್ದಾರೆ.
'ಯಾವುದೇ ಅಪರಾಧದ ಆರೋಪಿಯಾಗಿದ್ದರೆ, ಆತನ ಅಪರಾಧ ಮತ್ತು ಶಿಕ್ಷೆಯನ್ನು ನ್ಯಾಯಾಲಯ ಮಾತ್ರ ನಿರ್ಧರಿಸುತ್ತದೆ. ಆದರೆ ಆರೋಪ ಬಂದ ತಕ್ಷಣ ಆರೋಪಿಗಳ ಕುಟುಂಬಕ್ಕೆ ಶಿಕ್ಷೆ ವಿಧಿಸುವುದು, ಅವರ ತಲೆಯ ಮೇಲಿನ ಸೂರು ತೆಗೆಯುವುದು, ಕಾನೂನು ಪಾಲಿಸದಿರುವುದು, ನ್ಯಾಯಾಲಯಕ್ಕೆ ಮಣಿಯದೇ ಇರುವುದು, ಆರೋಪ ಬಂದ ತಕ್ಷಣ ಆರೋಪಿಯ ಮನೆ ಕೆಡವುವುದು- ಇದು ನ್ಯಾಯವಲ್ಲ. ಇದು ಅನಾಗರಿಕತೆ ಮತ್ತು ಅನ್ಯಾಯದ ಪರಮಾವಧಿ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾನೂನು ಪಾಲಕ ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿರಬೇಕು. ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಗೆ ಬದ್ಧವಾಗಿರುವುದು ಸುಸಂಸ್ಕೃತ ಸಮಾಜದಲ್ಲಿ ಸರ್ಕಾರಗಳು ಪಾಲಿಸಬೇಕಾಗುತ್ತದೆ. ರಾಜಧರ್ಮವನ್ನು ಅನುಸರಿಸದವನು ಸಮಾಜಕ್ಕಾಗಲೀ ದೇಶಕ್ಕಾಗಲೀ ಪ್ರಯೋಜನವಾಗಲಾರನು. ಬುಲ್ಡೋಜರ್ ನ್ಯಾಯವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಅದು ನಿಲ್ಲಬೇಕು ಎಂದು ಬರೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕೂಡ ಬುಲ್ಡೋಜರ್ ಸಂಸ್ಕೃತಿಯನ್ನು ಟೀಕಿಸಿದ್ದರು. ಶನಿವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅವರು, 'ನಾನು ಬುಲ್ಡೋಜರ್ ಸಂಸ್ಕೃತಿಯ ವಿರೋಧಿ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಆದರೆ ಶಿಕ್ಷಿಸುವ ಹಕ್ಕು ನ್ಯಾಯಾಲಯಕ್ಕೆ ಇದೆಯೇ ಹೊರತು ಯಾವುದೇ ಆಡಳಿತ ಅಧಿಕಾರಿ ಅಥವಾ ಸಂಸದ ಎಂಎಲ್ಎ ಅಲ್ಲ. ಛತ್ತರ್‌ಪುರದಲ್ಲಿರುವ ಶೆಹಜಾದ್ ಅಲಿ ಅವರ ಮನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ನೆಲಸಮವಾಗಿದೆಯೇ ಅಥವಾ ಅತಿಕ್ರಮಣದಿಂದಾಗಿ ನೆಲಸಮವಾಗಿದೆಯೇ? ಆಡಳಿತ ಇದನ್ನು ಬಹಿರಂಗಪಡಿಸಬೇಕು ಎಂದು ಬರೆದುಕೊಂಡಿದ್ದರು.
ಎರಡು ದಿನಗಳ ಹಿಂದೆ ಛತ್ತರ್‌ಪುರ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಕೆಲ ಪೊಲೀಸರು ಗಾಯಗೊಂಡಿದ್ದರು. ಮರುದಿನವೇ ಪೊಲೀಸರು ಆರೋಪಿಯೊಬ್ಬನ ಮನೆಯನ್ನು ಕೆಡವಿದರು. ಅಷ್ಟೇ ಅಲ್ಲ, ಮೂರು ಐಷಾರಾಮಿ ಕಾರುಗಳು ಕೂಡ ಬುಲ್ಡೋಜರ್‌ಗಳಿಂದ ನಜ್ಜುಗುಜ್ಜಾಗಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗರ್ಹಿ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದ್ದಾರೆ.
Advertisement