
ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಕರಾಳ ಲೈಂಗಿಕ ಕಿರುಕುಳದ ಅನುಭವವನ್ನು ಅನೇಕ ಕಲಾವಿದರು ಹೇಳಿಕೊಂಡ ಬೆನ್ನಲ್ಲೇ ಅವರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ಭಾನುವಾರ ವಿಶೇಷ ತಂಡವನ್ನು ರಚಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ನಂತರ, ಸರ್ಕಾರ ಭಾನುವಾರ ಏಳು ಸದಸ್ಯರ ತಂಡವನ್ನು ರಚಿಸಿದೆ. ಐಜಿ ಸ್ಪರ್ಜನ್ ಕುಮಾರ್ ನೇತೃತ್ವದ ವಿಶೇಷ ತಂಡದಲ್ಲಿ ನಾಲ್ವರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳು ಇರಲಿದ್ದಾರೆ.
ಕ್ರೈಂ ಬ್ರಾಂಚ್ ಎಡಿಜಿಪಿ ಎಚ್.ವೆಂಕಟೇಶ್ ತಂಡದ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
2017ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟಿಯೊಬ್ಬರ ಲೈಂಗಿಕ ದೌರ್ಜನ್ಯದ ನಂತರ, ಕೇರಳ ಸರಕಾರವು ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ನೇಮಿಸಿತು. ಈ ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಹಿರಂಗಪಡಿಸಿದೆ.
ಸಮಿತಿ ವರದಿಯಿಂದಾಗಿ ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ ಮತ್ತು ನಟ ಸಿದ್ದಿಕ್ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement