
ಚೆನ್ನೈ: ಉದ್ಯೋಗಕ್ಕಾಗಿ ಲಂಚ ಸ್ವೀಕಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಮತ್ತೆ ಸಚಿವ ಸ್ಥಾನ ಪಡೆದಿದ್ದು, ಈ ಕುರಿತು ಸ್ವತಃ ಸುಪ್ರೀಂ ಕೋರ್ಟ್ ಕೂಡ ಅಚ್ಚರಿ ವ್ಯಕ್ತಪಡಿಸಿದೆ.
ಉದ್ಯೋಗಕ್ಕಾಗಿ ಲಂಚ ಸ್ವೀಕಾರ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ಕೂಡಲೇ ಸೆಂಥಿಲ್ ಬಾಲಾಜಿ ಅವರನ್ನು ತಮಿಳುನಾಡಿನಲ್ಲಿ ಸಚಿವರನ್ನಾಗಿ ನೇಮಿಸಲಾಗಿದ್ದು, ಈ ವಿಚಾರ ತಿಳಿದ ಸುಪ್ರೀಂ ಕೋರ್ಟ್ ಕೂಡ ಸೋಮವಾರ ಆಶ್ಚರ್ಯ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ಪೀಠವು ಇಂದಿನ ವಿಚಾರಣೆಯಲ್ಲಿ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.
“ನಾವು ಜಾಮೀನು ಮಂಜೂರು ಮಾಡಿದೆವು ಹಾಗೂ ನೀವು ಮರು ದಿನವೇ ಸಚಿವರಾದಿರಿ! ನಿಮ್ಮ ಈಗಿನ ಹಿರಿಯ ಸಂಪುಟ ಸಚಿವ ಹುದ್ದೆಯಿಂದ ಸಾಕ್ಷಿಗಳು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಯಾರಾದರೂ ಭಾವಿಸಬಹುದಾಗಿದೆ. ಏನಾಗುತ್ತಿದೆ ಇಲ್ಲಿ?” ಎಂದು ನ್ಯಾ. ಓಕಾ ಪ್ರಶ್ನಿಸಿದ್ದಾರೆ.
ಅಂತೆಯೇ ಸೆಂಥಿಲ್ ಬಾಲಾಜಿಗೆ ಜಾಮೀನು ಮಂಜೂರಾದ ನಂತರ, ಸಾಕ್ಷಿಗಳು ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬ ಸಂಗತಿಯ ಕುರಿತು ನಾವು ಪರಿಶೀಲಿಸುವುದಾಗಿಯೂ ಪೀಠ ಹೇಳಿದೆ. ‘2ನೇ ಪ್ರತಿವಾದಿ (ಬಾಲಾಜಿ) ವಿರುದ್ಧದ ಪೂರ್ವಾಪರ ಆರೋಪಗಳ ಗಂಭೀರತೆಯನ್ನು ಪರಿಗಣಿಸಿದರೆ, ಕ್ಯಾಬಿನೆಟ್ ಸಚಿವ ಸ್ಥಾನದಲ್ಲಿರುವ 2ನೇ ಪ್ರತಿವಾದಿಯ ವಿರುದ್ಧ ಹೇಳಿಕೆ ನೀಡಲು ಸಾಕ್ಷಿಗಳು ಮನಸ್ಸು ಮಾಡದಿರಬಹುದು ಎಂಬ ಆತಂಕವಿದೆ...
ಮೇಲ್ನೋಟಕ್ಕೆ ನಾವು ಅರ್ಜಿಯನ್ನು ಪರಿಗಣಿಸಲು ಒಲವು ತೋರುವ ಏಕೈಕ ಅಂಶವಾಗಿದೆ ಮತ್ತು ಅರ್ಹತೆಯ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ ಮತ್ತು ಅರ್ಜಿಯ ತೀರ್ಪು ಮೇಲೆ ಹೇಳಿದ್ದಕ್ಕೆ ಸೀಮಿತವಾಗಿರುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಲದೆ ಈ ಕುರಿತು ಸೂಚನೆಗಳನ್ನು ಪಡೆಯಲು ಸೆಂಥಿಲ್ ಬಾಲಾಜಿಯ ವಕೀಲರನ್ನು ಕೇಳಿದೆ ಮತ್ತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಿದೆ.
ಇನ್ನು ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ವಿರುದ್ಧ ಮೇಲ್ನೋಟದ ಸಾಕ್ಷಿಗಳಿರುವುದನ್ನು ಸುಪ್ರೀಂ ಕೋರ್ಟ್ ಪತ್ತೆ ಹಚ್ಚಿದರೂ, ಅವರು ದೀರ್ಘಾವಧಿಯಿಂದ ಬಂಧನದಲ್ಲಿದ್ದಾರೆ (ಜೂನ್ 2023ರಿಂದ) ಹಾಗೂ ಶೀಘ್ರದಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಆದರೆ ಜೈಲಿನಿಂದ ಬಿಡುಗಡೆಗೊಂಡ ಕೂಡಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್, ಅಸಾಂಪ್ರದಾಯಿಕ ಇಂಧನಗಳ ಅಭಿವೃದ್ಧಿ, ಅಬಕಾರಿ ಸಚಿವರಾಗಿ ವಿ.ಸೆಂಥಿಲ್ ಬಾಲಾಜಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Advertisement