
ಅಹಮದಾಬಾದ್: ವಿಲಕ್ಷಣ ಘಟನೆಯೊಂದರಲ್ಲಿ ಗುಜರಾತ್ ರಾಜ್ಯದ ಮೆಹ್ಸಾನ್ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜನರ ಒಪ್ಪಿಗೆಯಿಲ್ಲದೆ ವಾಮಮಾರ್ಗ ಮೂಲಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಮೆಹ್ಸಾನಾ ಜಿಲ್ಲೆಯ ನವಿ ಶೆಧವಿ ಗ್ರಾಮದ 30 ವರ್ಷದ ಅವಿವಾಹಿತ ಗೋವಿಂದ ದಾಂತಾನಿ ಎಂಬುವವರು ತಮ್ಮ ಅರಿವಿಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾದವರಾಗಿದ್ದಾರೆ. ವಿವಿಧೋದ್ದೇಶ ಆರೋಗ್ಯ ಕಾರ್ಯಕರ್ತರೊಬ್ಬರು ಕೃಷಿ ಕೆಲಸಕ್ಕೆ ಕರೆಸಿಕೊಳ್ಳುವ ನೆಪದಲ್ಲಿ ಗೋವಿಂದ ಅವರನ್ನು ಪುಸಲಾಯಿಸಿ ಆಮಿಷವೊಡ್ಡಿ ಅಹಮದಾಬಾದ್ ಬಳಿಯ ಅದಾಲಾಜ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಮುಂದಿನ ತಿಂಗಳು ಗೋವಿಂದನ ಮದುವೆ ನಿಗದಿಯಾಗಿತ್ತು. ಹೀಗಿರುವಾಗ ಆರೋಗ್ಯ ಇಲಾಖೆ ಅಧಿಕಾರಿಗಳು ತನ್ನ ಒಪ್ಪಿಗೆ ಇಲ್ಲದೆ ಮತ್ತು ತನ್ನ ಅರಿವಿಗೆ ಬಾರದೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ದುಃಖದಿಂದ ಹೇಳುತ್ತಾರೆ.
ನಡೆದ ಘಟನೆಯೇನು?: ಗ್ರಾಮದ ಮಾಜಿ ಸರಪಂಚ್ ಪ್ರಹ್ಲಾದ್ ಠಾಕೂರ್ ಅವರು ಘಟನೆಯ ಬಗ್ಗೆ ಹೇಳುತ್ತಾರೆ. ಎರಡು ದಿನಗಳ ಹಿಂದೆ, ಆರೋಗ್ಯ ಕಾರ್ಯಕರ್ತೆಯೊಬ್ಬರು ಹೊಲಕ್ಕೆ ಬಂದು ಗೋವಿಂದಗೆ ದಿನಕ್ಕೆ 500 ರೂಪಾಯಿ ಕೊಡುತ್ತೇವೆ, ನಿಂಬೆಹಣ್ಣು ಮತ್ತು ಪೇರಳ ಕೀಳುವ ಕೆಲಸ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಗೋವಿಂದ ಆಕೆಯ ಮಾತನ್ನು ನಂಬಿ ಅವರ ಕಾರಿನಲ್ಲಿ ಹೋಗುತ್ತಾನೆ, ದಾರಿ ಮಧ್ಯೆ 100 ರೂಪಾಯಿಗೆ ಮದ್ಯ ಕುಡಿಸುತ್ತಾರೆ. ನಂತರ ಆತನನ್ನು ಸರ್ಕಾರಿ ಆಂಬ್ಯುಲೆನ್ಸ್ ವಾಹನದಲ್ಲಿ ಕೂರಿಸಿ ಗಾಂಧಿನಗರ ಹತ್ತಿರದ ಅಡಾಲಾಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ, ಗೋವಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮರುದಿನ, ಆರೋಗ್ಯ ಇಲಾಖೆ ಸಿಬ್ಬಂದಿ ಗೋವಿಂದನನ್ನು ಕರೆದುಕೊಂಡು ಬಂದು ಮತ್ತೆ ಜಮೀನಿನಲ್ಲಿ ಬಿಟ್ಟುಹೋಗಿದ್ದಾರೆ. ಆರಂಭದಲ್ಲಿ ಏನಾಯಿತು ಎಂದು ತಿಳಿಯದ ಗೋವಿಂದ ಮರುದಿನ ಮೂತ್ರ ಮಾಡುವಾಗ ತನ್ನ ಮೂತ್ರಕೋಶ ನೋವಾಗುತ್ತಿದ್ದಾಗ ವೈದ್ಯರ ಬಳಿ ಹೋಗಿ ತೋರಿಸಿದಾಗ ವಿಷಯ ಗೊತ್ತಾಗಿದೆ.
ನಂತರ ಜಮೀನಿನಲ್ಲಿದ್ದ ತನ್ನನ್ನು ಯಾರೋ ಬಂದು ಪುಸಲಾಯಿಸಿ ಹೇಗೆ ಕರೆದುಕೊಂಡು ಹೋದರು, ಅಲ್ಲಿ ಆಲ್ಕೋಹಾಲ್ ಕುಡಿಸಿ ಪ್ರಜ್ಞೆ ತಪ್ಪುವಂತೆ ಹೇಗೆ ಮಾಡಿದರು ಎಂದು ಇಡೀ ಘಟನೆಯನ್ನು ವಿವರಿಸಿದ್ದಾರೆ.
ಗುಜರಾತ್ ರಾಜ್ಯದಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 4 ರವರೆಗೆ ಕುಟುಂಬ ಯೋಜನೆ ಪಾಕ್ಷಿಕವನ್ನು ಆಚರಿಸುತ್ತಿದ್ದು, ಜಿಲ್ಲಾ ಆರೋಗ್ಯ ಇಲಾಖೆ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ ಈ ರೀತಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೆಹ್ಸಾನಾ ಜಿಲ್ಲೆಯಲ್ಲಿ 175 ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಗುರಿಯನ್ನು ನಿಗದಿಪಡಿಸಲಾಗಿದೆ, ಆದರೆ ಇದುವರೆಗೆ 28 ಮಂದಿಗೆ ಯಶಸ್ವಿಯಾಗಿ ಅವರ ಅರಿವಿಗೆ ಬಾರದೆ ಒಪ್ಪಿಗೆಯಿಲ್ಲದೆ ಮಾಡಿಸಿದ್ದಾರೆ ಎಂದು ಮೂಲವೊಂದು ಹೇಳಿದೆ. ತಮ್ಮ ಗುರಿ ತಲುಪುವುದು ಸವಾಲಾಗಿ ಕಂಡುಬರುವುದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರಗಳು ಗುಜರಾತ್ ರಾಜ್ಯಾದ್ಯಂತ ನಡೆಯುತ್ತಿವೆ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಮಹೇಶ್ ಕಪಾಡಿಯಾ ಹೇಳಿದ್ದಾರೆ.
"ಮೆಹ್ಸಾನಾ ಜಿಲ್ಲೆಯೊಂದರಲ್ಲೇ, ನವೆಂಬರ್ 22 ರಿಂದ 28 ಫಲಾನುಭವಿಗಳು ಅಗತ್ಯ ಕುಟುಂಬದ ಒಪ್ಪಿಗೆಯೊಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದಾಗ್ಯೂ, ಈ ಸಂದರ್ಭದಲ್ಲಿ, ಫಲಾನುಭವಿಯ ಪತ್ನಿ ಅಥವಾ ಅವರ ಕುಟುಂಬ ಸದಸ್ಯರಿಂದ ಕಡ್ಡಾಯವಾಗಿ ಒಪ್ಪಿಗೆ ಸಿಕ್ಕಿಲ್ಲ ಎಂದು ಡಾ ಕಪಾಡಿಯಾ ಹೇಳಿದರು.
Advertisement