ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ದೆಹಲಿ ಪೊಲೀಸರ ಪ್ರಕಾರ, 40 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಬಂದಿವೆ. ಇಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ.
Security personnel stand outside the DPS RKPuram after Receives Bomb threat in New Delhi on Monday.
ದೆಹಲಿಯಲ್ಲಿ ಬಾಂಬ್ ಬೆದರಿಕೆ ಬಂದ ನಂತರ ಭದ್ರತಾ ಸಿಬ್ಬಂದಿ ದೆಹಲಿ ಪಬ್ಲಿಕ್ ಸ್ಕೂಲ್ ಆರ್‌ಕೆ ಪುರಂ ಹೊರಗೆ ನಿಂತಿದ್ದಾರೆ.
Updated on

ನವದೆಹಲಿ: ರಾಜಧಾನಿ ದೆಹಲಿಯ ಹಲವು ಖಾಸಗಿ ಶಾಲೆಗಳಿಗೆ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, 40 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಬಂದಿವೆ. ಇಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್ ಹಣ ನೀಡಬೇಕು ಇಲ್ಲದಿದ್ದರೆ ಶಾಲಾ ಕಟ್ಟಡಗಳ ಒಳಗೆ ಹಾಕಲಾದ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಭೀತಿ ಹುಟ್ಟಿಸಲಾಗಿದೆ.

ಕಳುಹಿಸಲಾಗಿರುವ ಬೆದರಿಕೆ ಮೇಲ್‌ನಲ್ಲಿ, ನಾನು ಶಾಲೆಗಳ ಕಟ್ಟಡಗಳ ಒಳಗೆ ಅನೇಕ ಬಾಂಬ್‌ಗಳನ್ನು ಇಟ್ಟಿದ್ದೇನೆ. ಬಾಂಬ್‌ಗಳು ಚಿಕ್ಕದಾಗಿದ್ದು ಅಡಗಿಸಿ ಇಡಲಾಗಿದೆ. ಇದರಿಂದ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ, ಆದರೆ ಬಾಂಬ್‌ಗಳನ್ನು ಸ್ಫೋಟಿಸುವಾಗ ಅನೇಕ ಜನರು ಗಾಯಗೊಳ್ಳಬಹುದು. ನನಗೆ 30 ಸಾವಿರ ಡಾಲರ್ ಹಣ ಬರದಿದ್ದರೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.

ಈ ಇಮೇಲ್ ನಿನ್ನೆ ಡಿಸೆಂಬರ್ 8 ರಂದು ರಾತ್ರಿ 11:38 ರ ಸುಮಾರಿಗೆ ಬಂದಿದೆ. ದೆಹಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಇತರ ತುರ್ತು ಸೇವೆಗಳ ಸಹಯೋಗದೊಂದಿಗೆ ತಕ್ಷಣದ ತನಿಖೆಗಳು ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ.

ಕೆಲವು ಶಾಲೆಗಳಲ್ಲಿ ಮಕ್ಕಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಿಗೆ ಯಾವುದೇ ಭಯವಾಗಬಾರದು ಎಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸದ್ಯಕ್ಕೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ತನಿಖೆ ಮುಂದುವರಿದಿದೆ. ಅಧಿಕಾರಿಗಳು ನಗರದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅತಿಶಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಸರ್ಕಾರ ಭದ್ರತೆ ಒದಗಿಸುವ ಕಾರ್ಯದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ದಿನನಿತ್ಯದ ಸುಲಿಗೆ, ಕೊಲೆ, ಗುಂಡಿನ ದಾಳಿಯ ನಂತರ ಈಗ ಶಾಲೆಗಳ ಮೇಲೆ ಬಾಂಬ್ ಸ್ಫೋಟದ ಬೆದರಿಕೆಗಳು ಬರುತ್ತಿವೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹಿಂದೆಂದೂ ಕೆಟ್ಟಿರಲಿಲ್ಲ. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಸುರಕ್ಷತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ದೆಹಲಿಯ ಜನರು ಕಾನೂನು ಮತ್ತು ಸುವ್ಯವಸ್ಥೆಯ ಕೆಟ್ಟ ಸ್ಥಿತಿಯನ್ನು ಈ ರೀತಿ ಹಿಂದೆಂದೂ ನೋಡಿರಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com