
ವಿಶಾಖಪಟ್ಟಣಂ: Loan App ಕಿರುಕುಳಕ್ಕೆ ಆಂಧ್ರಪ್ರದೇಶದಲ್ಲಿ ಮತ್ತೊಂದು ಬಲಿಯಾಗಿದ್ದು, ಕೇವಲ 2 ಸಾವಿರ ರೂ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಪತ್ನಿಯ Morphed ಅಶ್ಲೀಲ ಫೋಟೋ ಹಂಚಿ ಕಿರುಕುಳ ನೀಡಿದ್ದರಿಂದ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಅಲ್ಲಿಪುರಂನ ಅಂಗಡಿದಿಬ್ಬ ಪ್ರದೇಶದ ನಿವಾಸಿ 25 ವರ್ಷದ ನರೇಂದ್ರ ಸಾವನ್ನಪ್ಪಿದ್ದು, ಅವರ ಪತ್ನಿ ಅಖಿಲಾದೇವಿ ಎಂಬುವವರ ಫೋಟೋವನ್ನು ಅಶ್ಲೀಲವಾಗಿ Morph ಮಾಡಿ ಶೇರ್ ಮಾಡಿದ್ದಾರೆ ಎಂಬ ಕಾರಣಕ್ಕೇ ನರೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ನರೇಂದ್ರ ಲೋನ್ ಆ್ಯಪ್ ಮೂಲಕ ಮನೆ ಖರ್ಚಿಗಾಗಿ 2 ಸಾವಿರ ರೂ ಸಾಲ ತೆಗೆದುಕೊಂಡಿದ್ದರಂತೆ. ಇದನ್ನು ತೀರಿಸಲು ವಿಳಂಬವಾದ ಹಿನ್ನಲೆಯಲ್ಲಿ ಲೋನ್ ಆ್ಯಪ್ ಸಿಬ್ಬಂದಿ ನರೇಂದ್ರಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೆ ಶೀಘ್ರ ಸಾಲ ಮರುಪಾವತಿ ಮಾಡುವಂತೆ ಬೆದರಿಕೆ ಕೂಡ ಹಾಕಿದ್ದು, ಈ ವೇಳೆ ನರೇಂದ್ರ ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆದರೂ ಲೋನ್ ಆ್ಯಪ್ ಸಿಬ್ಬಂದಿ ನರೇಂದ್ರ ಅವರ ಪತ್ನಿ ಅಖಿಲಾದೇವಿ ಅವರ ಫೋಟೋಗಳನ್ನು ಮಾರ್ಫ್ ಮಾಡಿ ಅಶ್ಲೀಲವಾಗಿ ಚಿತ್ರಿಸಿ ಅವರದ್ದೇ ಮೊಬೈಲ್ ಗೆ ಕಳುಹಿಸಿ ಸಾಲ ಮರುಪಾವತಿ ಮಾಡದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ನಿಮ್ಮ ಸಂಪರ್ಕದಲ್ಲಿರುವವರಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ನರೇಂದ್ರ ಅವರನ್ನು ಅಖಿಲಾದೇವಿ ಪ್ರಶ್ನೆ ಮಾಡಿದ್ದು, ಈ ವೇಳೆ ನರೇಂದ್ರ 'ಹೌದು ಮನೆಯ ಖರ್ಚಿಗಾಗಿ 2 ಸಾವಿರ ರೂ ತೆಗೆದುಕೊಂಡಿದ್ದೆ. ಶೀಘ್ರ ತೀರಿಸುತ್ತೇನೆ' ಎಂದಿದ್ದಾರೆ. ಈ ವೇಳೆ ಅಖಿಲಾದೇವಿ ನಡೆದ ಘಟನೆಯನ್ನು ವಿವರಿಸಿದ್ದು, ಶೀಘ್ರ ಸಾಲ ತೀರಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಅಖಿಲಾ ತಮ್ಮ ಆಸ್ಪತ್ರೆ ಕೆಲಸಕ್ಕೆ ಹೋಗಿದ್ದು, ರಾತ್ರಿ 8 ಗಂಟೆಗೆ ಮನೆಗೆ ವಾಪಸಾಗಿದ್ದಾರೆ.
ಈ ವೇಳೆ ನರೇಂದ್ರ ಬಾಗಿಲು ತೆರೆದಿಲ್ಲ. ಬಳಿಕ ಅಖಿಲಾ ಚಿಕ್ಕಮ್ಮನಿಗೆ ಕರೆ ಮಾಡಿದ್ದು, ಇಬ್ಬರೂ ಬಾಗಿಲು ಒಡೆದು ಒಳಗೆ ಹೋದಾಗ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ನರೇಂದ್ರ ಶವ ಪತ್ತೆಯಾಗಿದೆ. ಕೂಡಲೇ ಅವರನ್ನು ಕೆಳಗಿಳಿಸಿ ಕೆ.ಜಿ.ಎಚ್. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ನರೇಂದ್ರ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿರುವ ಮಹಾರಾಣಿಪೇಟೆ ಸಿಐ ಬಿ.ಭಾಸ್ಕರ ರಾವ್, 'ಯುವಕನ ಸಾವಿಗೆ ಕಾರಣರಾದ ಲೋನ್ ಆ್ಯಪ್ ನಿರ್ವಾಹಕರನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
BNS 108, 79, 351(2), IT ಕಾಯಿದೆಯ ಸೆಕ್ಷನ್ 66 (c), 67(a) ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ, ಮಹಿಳೆಯರನ್ನು ಅವಮಾನಿಸುವುದು, ಕ್ರಿಮಿನಲ್ ಬೆದರಿಕೆ, ಗುರುತಿನ ಮೋಸದ ಬಳಕೆ, ಪ್ರಕಟಣೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಲೈಂಗಿಕ ಮತ್ತು ಅಶ್ಲೀಲ ಕಟೆಂಟ್ ರವಾನಿಸುವುದು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮೃತ ನರೇಂದ್ರ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಅದನ್ನು ಪರೀಕ್ಷಿಸಲು ಮತ್ತು ಅಪರಾಧಿಗಳನ್ನು ಗುರುತಿಸಲು ಸೈಬರ್ ತಜ್ಞರ ತಂಡವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂಖಬ್ರತ ಬಾಗ್ಚಿ ತಿಳಿಸಿದ್ದಾರೆ.
Advertisement