
ಬೆಂಗಳೂರು: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಬೆಂಗಳೂರು ಪೊಲೀಸರು ಯುಪಿಗೆ ತೆರಳಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಟೆಕ್ಕಿ ಅತುಲ್ ಅತ್ತೆ, ಬಾಮೈದ ಜೌನ್‌ಪುರದಲ್ಲಿರುವ ತಮ್ಮ ಮನೆಯಿಂದ ಪರಾರಿಯಾಗಿದ್ದಾರೆ.
ಏತನ್ಮಧ್ಯೆ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಪೊಲೀಸರು, ಕರ್ನಾಟಕದಿಂದ ತಾವು ಇನ್ನಷ್ಟೇ ಈ ಬಗ್ಗೆ ಯಾವುದೇ ಅಧಿಕೃತ ಸಂದೇಶ ಸ್ವೀಕರಿಸಬೇಕಿದೆ, ಇಲ್ಲಿವರೆಗೂ ಅಧಿಕೃತ ಸಂದೇಶ ಬಂದಿಲ್ಲ ಎಂದು ಹೇಳಿದ್ದಾರೆ.
ಪತ್ನಿ ಹಾಗೂ ಪತ್ನಿಯ ಕುಟುಂಬ ಸದಸ್ಯರು ನೀಡಿದ ಕಿರುಕುಳದಿಂದ ಬೇಸತ್ತು 34 ವರ್ಷ ವಯಸ್ಸಿನ ಟೆಕ್ಕಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಈ ಘಟನೆ ಬಳಿಕ ಟೆಕ್ಕಿ ಪತ್ನಿ ವಿರುದ್ಧ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ಸುಶೀಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಿಶಾ ಸಿಂಘಾನಿಯಾ ಮತ್ತು ಅವರ ಪುತ್ರ ಅನುರಾಗ್ ಅಲಿಯಾಸ್ ಪಿಯೂಶ್ ಸಿಂಘಾನಿಯಾ ಅವರು ಮೋಟಾರು ಸೈಕಲ್‌ನಲ್ಲಿ ಜೌನ್‌ಪುರದ ಖೋವಾ ಮಂಡಿ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಹೊರಟಿದ್ದು ಈ ವರೆಗೂ ಹಿಂತಿರುಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಈ ಪ್ರಕರಣದ ಕುರಿತು ನಾವು ಬೆಂಗಳೂರು ಪೊಲೀಸರಿಂದ ಯಾವುದೇ ಅಧಿಕೃತ ಸಂವಹನವನ್ನು ಇನ್ನೂ ಸ್ವೀಕರಿಸಿಲ್ಲ" ಎಂದು ಜೌನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ಪಾಲ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವಂತೆ ಖೋವಾ ಮಂಡಿ ಪ್ರದೇಶದಲ್ಲಿ ವಾಡಿಕೆಯ ಮಟ್ಟದ ಪೊಲೀಸರ ನಿಯೋಜನೆ ಇದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ನಿಶಾ ಸಿಂಘಾನಿಯಾ ಮತ್ತು ಇತರರನ್ನು ಬಂಧಿಸಲು ಅಥವಾ ಅವರ ಮನೆಯಿಂದ ಹೊರಹೋಗದಂತೆ ತಡೆಯಲು ಅಥವಾ ಗೃಹಬಂಧನದಲ್ಲಿ ಇರಿಸಲು ಪೊಲೀಸರಿಗೆ ಯಾವುದೇ ಆದೇಶವಿಲ್ಲ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಮಿಥಿಲೇಶ್ ಮಿಶ್ರಾ ಹೇಳಿದ್ದಾರೆ.
ಅವರ ಕುಟುಂಬ ಜೌನ್‌ಪುರದಲ್ಲಿ ವಾಸಿಸುತ್ತಿದ್ದರೆ, ನಿಕಿತಾ ಸಿಂಘಾನಿಯಾ ತನ್ನ ಮಗನೊಂದಿಗೆ ದೆಹಲಿಯಲ್ಲಿ ಉಳಿದು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ನಿಖಿತಾ ಏಪ್ರಿಲ್ 2019 ರಲ್ಲಿ ಸುಭಾಷ್ ಅವರನ್ನು ಮದುವೆಯಾಗಿದ್ದರು ಮತ್ತು 2022 ರಲ್ಲಿ ಅವರು ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಪತಿ ಸುಭಾಷ್ ಮತ್ತು ಅತ್ತೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
Advertisement