ಸಂಸತ್ತಿನಲ್ಲಿ ನೆಹರು-ಗಾಂಧಿ ಕುಟುಂಬ ವಿರುದ್ಧ ಪ್ರಧಾನಿ ವಾಗ್ದಾಳಿ: ನನ್ನ ಬೆಳವಣಿಗೆಯಲ್ಲಿ ಸಂವಿಧಾನದ ಪಾಲೂ ಇದೆ ಎಂದ ಮೋದಿ!

ಸಂವಿಧಾನವನ್ನು ಆರು ದಶಕಗಳಲ್ಲಿ 75 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಅಭ್ಯಾಸ ಮೊದಲ ಪ್ರಧಾನಿಯಿಂದ ಬೆಳೆಯಿತು. ನಂತರ ಅದನ್ನು ಇಂದಿರಾ ಗಾಂಧಿ ಪೋಷಿಸಿದರು. ಈ ಕುಟುಂಬ ಪ್ರತಿ ಹಂತದಲ್ಲೂ ಸಂವಿಧಾನಕ್ಕೆ ಸವಾಲು ಹಾಕಿದೆ.
PM Modi
ಪ್ರಧಾನಿ ಮೋದಿ
Updated on

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಆರಂಭಿಸಿ, ನೆಹರೂ-ಗಾಂಧಿ ಕುಟುಂಬ ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದರು.

ಸಂವಿಧಾನ ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ಎರಡನೇ ದಿನದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸಂವಿಧಾನವನ್ನು ಆರು ದಶಕಗಳಲ್ಲಿ 75 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಅಭ್ಯಾಸ ಮೊದಲ ಪ್ರಧಾನಿಯಿಂದ ಬೆಳೆಯಿತು. ನಂತರ ಅದನ್ನು ಇಂದಿರಾ ಗಾಂಧಿ ಪೋಷಿಸಿದರು. ಈ ಕುಟುಂಬ ಪ್ರತಿ ಹಂತದಲ್ಲೂ ಸಂವಿಧಾನಕ್ಕೆ ಸವಾಲು ಹಾಕಿದೆ. ಅದರ ಸದಸ್ಯರು 55 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾರಣ ಅವರ ಕುಟುಂಬದ ಬಗ್ಗೆ ಮಾತನಾಡುತ್ತಿರುವುದಾಗಿ ತಿಳಿಸಿದರು.

ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಪ್ರಧಾನಿ ಹುದ್ದೆಯಲ್ಲಿದ್ದಾಗ ಮಾಡಿದ್ದ ಹಲವಾರು ನಿರ್ಧಾರಗಳನ್ನು ಉಲ್ಲೇಖಿಸಿದ ಪ್ರಧಾನಿ, ರಕ್ತದ ರುಚಿ ಹೊಂದಿರುವ ಕುಟುಂಬ ಸಂವಿಧಾನವನ್ನು ಪದೇ ಪದೇ ಘಾಸಿಗೊಳಿಸಿದೆ. ಅವರ ಮುಂದಿನ ಪೀಳಿಗೆ ಕೂಡ ಅದೇ ಆಟದಲ್ಲಿದೆ ಎಂದು ಪ್ರಧಾನಿ ಸದನದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಂಸದೆ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧವೂ ವಾಗ್ದಾಳಿ ನಡೆಸಿದರು. ಸಂವಿಧಾನದ ಬಲದಿಂದ ಆ ಸ್ಥಾನ ತಲುಪಿದ ನನ್ನಂತಹ ಸಾಮಾನ್ಯ ಕುಟುಂಬದ ಬಂದ ನಾಯಕರು ಅವರಂತೆ ಮಾಡಲಿಲ್ಲ. ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದರು.

ನೆಹರು-ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯಲು ದೇಶದ ಮಾರ್ಗದರ್ಶಿ ದಾಖಲೆಯನ್ನು ತಿದ್ದುಪಡಿ ಮಾಡಿದರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದರು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದುರಂಕಾರಿ ವ್ಯಕ್ತಿಯೊಬ್ಬರು ಸಂಪುಟದ ನಿರ್ಧಾರವನ್ನು ಹರಿದು ಹಾಕಿದ್ದರು ಎಂದು ರಾಹುಲ್ ಗಾಂಧಿಯನ್ನು ಹೆಸರಿಸದೆ ಪ್ರಧಾನಿ ವಾಗ್ದಾಳಿ ನಡೆಸಿದರು.

ಯುಪಿಎ ಆಡಳಿತದಲ್ಲಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಗೆ ಕ್ಯಾಬಿನೆಟ್‌ಗಿಂತ ಹೆಚ್ಚಿನ ಸ್ಥಾನಮಾನ ನೀಡಲಾಗಿತ್ತು. ದೇಶದ ಇತಿಹಾಸದಲ್ಲಿ ಅತಿದೊಡ್ಡ "ಜುಮ್ಲಾ" ಎಂದರೆ ಅವರ ನಾಲ್ಕು ತಲೆಮಾರುಗಳು ಬಳಸಿದ ಗರೀಬಿ ಹಟಾವೋ ಎಂದು ಹೇಳಿದ ಪ್ರಧಾನಿ, ರಾಜಕೀಯೇತರ ಕುಟುಂಬಗಳ ಯುವಕರು ರಾಜಕೀಯಕ್ಕೆ ಸೇರಲು ಮತ್ತು ದೇಶದ ರಾಜಕೀಯಕ್ಕೆ ಹೊಸ ಶಕ್ತಿಯನ್ನು ತುಂಬಲು ಪ್ರೋತ್ಸಾಹಿಸಲು ಎಲ್ಲಾ ಪಕ್ಷಗಳಿಗೆ ಕರೆ ನೀಡಿದರು.

11 ನಿರ್ಣಯಗಳು: ಪ್ರಧಾನಿಯವರು ಸಂಸತ್ತಿನನಲ್ಲಿ 11 ನಿರ್ಣಯಗಳನ್ನು ಪ್ರಸ್ತಾಪಿಸಿದರು. ಅವು ಈ ಕೆಳಗಿನಂತಿವೆ:

1. ಸರ್ಕಾರವಾಗಲಿ ಅಥವಾ ನಾಗರಿಕರಾಗಲಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು

2. ಪ್ರತಿಯೊಬ್ಬರೂ ವಿಕಾಸ್ (ಅಭಿವೃದ್ಧಿ) ನಿಂದ ಪ್ರಯೋಜನ ಪಡೆಯಬೇಕು

3. ಭ್ರಷ್ಟಾಚಾರದ ಕಡೆಗೆ ಶೂನ್ಯ ಸಹಿಷ್ಣುತೆ

4. ದೇಶದ ನಿಯಮಗಳು ಮತ್ತು ಸಂಪ್ರದಾಯಗಳಲ್ಲಿ ನಾಗರಿಕರು ಹೆಮ್ಮೆಪಡಬೇಕು

5. ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ

6. ಕುಟುಂಬ ರಾಜಕೀಯದಿಂದ ಮುಕ್ತಿ

7. ಸಂವಿಧಾನಕ್ಕೆ ಗೌರವ

8. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು

9. ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಭಾರತವು ಉದಾಹರಣೆಯಾಗಬೇಕು

10. ರಾಜ್ಯಗಳ ಅಭಿವೃದ್ಧಿಯ ಮೂಲಕ ರಾಷ್ಟ್ರದ ಅಭಿವೃದ್ಧಿ

11. ಏಕ ಭಾರತ ಶ್ರೇಷ್ಠ ಭಾರತ್

PM Modi
ನಮ್ಮ ಏಕತೆಗೆ ಸಂವಿಧಾನವೇ ಆಧಾರ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಭಾರತ ಪ್ರಜಾಪ್ರಭುತ್ವದ ತಾಯಿ: 1949 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವನ್ನು "ಅಸಾಧಾರಣ" ಎಂದು ಶ್ಲಾಘಿಸಿದ ಪ್ರಧಾನಿ, ದೇಶದ ಪ್ರಾಚೀನ ಪ್ರಜಾಪ್ರಭುತ್ವದ ಬೇರುಗಳು ಬಹಳ ಹಿಂದಿನಿಂದಲೂ ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com