
ಪಟಿಯಾಲ: ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ವೇಳೆ ಡಿಸೆಂಬರ್ 14 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 57 ವರ್ಷದ ವ್ಯಕ್ತಿಯೊಬ್ಬರು ಪಟಿಯಾಲದ ಸರ್ಕಾರಿ ರಾಜೀಂದ್ರ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾರೆ. ಲೂದಿಯಾನ ಜಿಲ್ಲೆಯ ರತನ್ಹೇರಿ ಗ್ರಾಮದ ರಂಜೋಧ್ ಸಿಂಗ್ ಮೃತಪಟ್ಟ ರೈತರಾಗಿದ್ದಾರೆ.
ನವೆಂಬರ್ 26 ರಿಂದ ಖಾನೌರಿ ಗಡಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರಂಜೋಧ್ ಸಿಂಗ್ ಅವರನ್ನು ಪಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೈತ ನಾಯಕರೊಬ್ಬರು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳಾಗಿ ಶಂಭು ಗಡಿಯಲ್ಲಿ ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಮೃತರು ಪತ್ನಿ, ಮಗಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ದೆಹಲಿ ಚಲೋ ಸ್ಥಗಿತಗೊಳಿಸಿದ ನಂತರ ಫೆಬ್ರವರಿ 13 ರಿಂದ ಹರಿಯಾಣ ಮತ್ತು ಪಂಜಾಬ್ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಬೀಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಶಾಸನಬದ್ಧ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ದಲ್ಲೆವಾಲ್ ಕಳೆದ ಮೂರು ವಾರಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು ಎನ್ನಲಾಗಿದೆ.
Advertisement