
ಭರೂಚ್: ಜಾಮೀನಿನ ಮೇಲೆ ಹೊರಗಿದ್ದ 35 ವರ್ಷದ ವ್ಯಕ್ತಿಯೊಬ್ಬ ಈ ಹಿಂದೆ ಲೈಂಗಿಕ ದೌರ್ಜನ್ಯ ಎಸಗಿದ್ದ 70 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿ ಶೈಲೇಶ್ ರಾಥೋಡ್ ಎಂಬಾತ ಡಿಸೆಂಬರ್ 15 ಮತ್ತು ಡಿಸೆಂಬರ್ 22 ರಂದು ಜಮೀನಿನಲ್ಲಿದ್ದ ವೃದ್ಧೆಯ ಗುಡಿಸಲಿಗೆ ತೆರಳಿ ಕೃತ್ಯ ಎಸಗಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿಎಲ್ ಚೌಧರಿ ತಿಳಿಸಿದ್ದಾರೆ.
ಈ ವಿಷಯವನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ.
ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಮೋದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ಅಪರಾಧ ವಿಭಾಗ, ವಿಶೇಷ ಕಾರ್ಯಾಚರಣೆ ತಂಡ ಮತ್ತು ಪೊಲೀಸರ ತಂಡಗಳನ್ನು ರಚಿಸಲಾಗಿದೆ.
ಸುಮಾರು 18 ತಿಂಗಳ ಹಿಂದೆ ಇದೇ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ರಾಥೋಡ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಜಾಮೀನಿನ ಮೇಲೆ ಹೊರಗಿದ್ದ ಆತ ಮತ್ತೆ ಅದೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ, ಭರೂಚ್ ಜಿಲ್ಲೆಯಲ್ಲಿ ವಲಸೆ ಕಾರ್ಮಿಕನ 11 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ. ಲೈಂಗಿಕ ದೌರ್ಜನ್ಯದ ವೇಳೆ ಉಂಟಾದ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆ ಸುಮಾರು ಒಂದು ವಾರದ ನಂತರ ಸಾವಿಗೀಡಾಗಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.
Advertisement