
ನವದೆಹಲಿ: ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ರಸ್ತೆಗೆ ಬಿದ್ದಿದ್ದ ಕಬ್ಬಿಣದ ಹಲಗೆಯ ಮೇಲೆ ಹರಿದು 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್ ಆದ ಘಟನೆ ನಡೆದಿದೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮಾಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ನಡುವೆ ಡಿಸೆಂಬರ್ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಮೃದ್ಧಿ ಹೆದ್ದಾರಿಯಲ್ಲಿ ರಸ್ತೆಗೆ ಬಿದ್ದಿದ್ದ ಕಬ್ಬಿಣದ ಹಲಗೆಯ ಮೇಲೆ ಹರಿದು 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್ ಆಗಿವೆ.
ಇದರಿಂದ ಹೆದ್ದಾರಿಯಲ್ಲಿ ಒಂದಷ್ಟು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಾಲ್ಕು ಚಕ್ರದ ವಾಹನಗಳು ಮತ್ತು ಸರಕು ಸಾಗಣೆ ಟ್ರಕ್‌ಗಳ ಸಂಚಾರದ ಮೇಲೆ ಇದು ಪರಿಣಾಮ ಬೀರಿತು. ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದಲ್ಲದೆ, ಬಹಳ ಸಮಯದಿಂದ ಯಾವುದೇ ನೆರವು ಸಿಗದೆ ಪ್ರಯಾಣಿಕರು ರಾತ್ರಿಯಿಡೀ ಹೆದ್ದಾರಿಯಲ್ಲಿ ಪರದಾಡಿದ್ದಾರೆ.
ಹೆದ್ದಾರಿ ಮೇಲೆ ಕಬ್ಬಿಣದ ಬೋರ್ಡ್ ಹೇಗೆ ಬಂತು?
ಇನ್ನು ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಬೋರ್ಡ್ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಎಸೆದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹೈ-ಸ್ಪೀಡ್ ಕಾರಿಡಾರ್‌ನ ಸುರಕ್ಷತೆಯನ್ನು ಪ್ರಶ್ನಿಸುವ ಸಮಯದಲ್ಲೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ದೇಶದ ಹೆದ್ದಾರಿಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡುವಂತೆ ಮಾಡಿವೆ. ಇದೇ ವರ್ಷದ ಜೂನ್‌ನಲ್ಲಿ, ಜಲ್ನಾ ಜಿಲ್ಲೆಯ ಸಮೃದ್ಧಿ ಹೆದ್ದಾರಿಯ ಕದ್ವಾಂಚಿ ಗ್ರಾಮದ ಬಳಿ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ಆರು ಜನರು ಸಾವನ್ನಪ್ಪಿ ಮತ್ತು ನಾಲ್ಕು ಮಂದಿ ಗಾಯಗೊಂಡಿದ್ದರು.
ಅಂದಹಾಗೆ ಸಮೃದ್ಧಿ ಮಹಾಮಾರ್ಗ್ ಮಹಾರಾಷ್ಟ್ರದಲ್ಲಿ ಭಾಗಶಃ ಕಾರ್ಯನಿರ್ವಹಿಸುವ ಆರು ಪಥದ ಮತ್ತು 701 ಕಿಮೀ ಉದ್ದದ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು 55,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
Advertisement