ಅಪ್ರಾಪ್ತ ಬಾಲಕನ ಜೊತೆ ಸರಸವಾಡುತ್ತಿದ್ದ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣ: ಆತ್ಮಹತ್ಯೆಯ ಕಥೆ ಕಟ್ಟಿದ ತಾಯಿ!
ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಶನಿವಾರ ಅಪ್ರಾಪ್ತ ಬಾಲಕನೊಂದಿಗೆ ಸರಸವಾಡುತ್ತಿದ್ದ 15 ವರ್ಷದ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದು ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆರೋಪಿ ಮತ್ತು ಆತನ ತಾಯಿ ಕಥೆ ಕಟ್ಟಿ ಹುಡುಗಿ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸತ್ಯಾಂಶ ಹೊರಬಿದ್ದಿದ್ದು, ಆರೋಪಿ ಹಾಗೂ ಆತನ ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಇನ್ನು ಸಂತ್ರಸ್ತೆ ಜೊತೆ ಸಿಕ್ಕಿಬಿದ್ದ 16 ವರ್ಷದ ಹುಡುಗನ ಮೇಲೆ ಪೋಸ್ಕೋ ಕಾಯ್ದೆಯಡಿ ಅತ್ಯಾಚಾರದ ಆರೋಪ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ, ಜನವರಿ 31ರಂದು ಕುಟುಂಬಸ್ಥರು ಸಮಾರಂಭವೊಂದರಲ್ಲಿ ಭಾಗವಹಿಸಲು ಹೋಗಿದ್ದರಿಂದ ಹುಡುಗಿ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಬಾಯ್ ಫ್ರೆಂಡ್ ಅನ್ನು ಮನೆಗೆ ಕರೆಸಿಕೊಂಡ ಅಪ್ರಾಪ್ತ ಬಾಲಕಿ ಆತನ ಜೊತೆ ಸರಸವಾಡುತ್ತಿದ್ದಾಗ ಅಚಾನಕ್ ಮನೆಗೆ ಬಂದ ಸಹೋದರನ ಕೈ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಅಪ್ರಾಪ್ತ ಬಾಲಕನನ್ನು ಹಿಡಿಯಲು ಆರೋಪಿ ಯತ್ನಿಸಿದನು ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕೋಪದಲ್ಲಿದ್ದ ಆರೋಪಿ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಘಟನೆ ಬಗ್ಗೆ ತನ್ನ ತಾಯಿಗೆ ಹೇಳಿದ್ದಾನೆ. ನಂತರ ಇಬ್ಬರು ಸೇರಿ ಪ್ರಕರಣವನ್ನು ಮುಚ್ಚಿಹಾಕಲು ಆತ್ಮಹತ್ಯೆಯ ಕಥೆ ಕಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ