ದೆಹಲಿ ಚಲೋ ಪ್ರತಿಭಟನೆ: ಕ್ರೀಡಾಂಗಣ ಜೈಲಾಗಿ ಪರಿವರ್ತಿಸಲ್ಲ ಎಂದ ದೆಹಲಿ ಸರ್ಕಾರ; ರೈತರ ಮೇಲೆ ಆಶ್ರುವಾಯು ಪ್ರಯೋಗ, ಹಲವರು ವಶಕ್ಕೆ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೊರಟಿರುವ ಸಾವಿರಾರು ರೈತರು ಪಂಜಾಬ್‌ ಮತ್ತು ಹರ್ಯಾಣ ನಡುವಿನ ಶಂಭು ಗಡಿಯಲ್ಲಿ ಸೇರುತ್ತಿದ್ದಂತೆಯೇ ಪೊಲೀಸರು ಅವರತ್ತ ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾನಿರತರನ್ನು ಚದುರಿಸಲು ಯತ್ನಿಸಿದ್ದಾರೆ.
'ದೆಹಲಿ ಚಲೋ' ಪ್ರತಿಭಟನೆ ವೇಳೆ ಶಂಭು ಗಡಿಯಲ್ಲಿ (ಪಂಜಾಬ್-ಹರಿಯಾಣ) ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ ಪೊಲೀಸರು.
'ದೆಹಲಿ ಚಲೋ' ಪ್ರತಿಭಟನೆ ವೇಳೆ ಶಂಭು ಗಡಿಯಲ್ಲಿ (ಪಂಜಾಬ್-ಹರಿಯಾಣ) ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ ಪೊಲೀಸರು.

ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೊರಟಿರುವ ಸಾವಿರಾರು ರೈತರು ಪಂಜಾಬ್‌ ಮತ್ತು ಹರ್ಯಾಣ ನಡುವಿನ ಶಂಭು ಗಡಿಯಲ್ಲಿ ಸೇರುತ್ತಿದ್ದಂತೆಯೇ ಪೊಲೀಸರು ಅವರತ್ತ ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾನಿರತರನ್ನು ಚದುರಿಸಲು ಯತ್ನಿಸಿದ್ದಾರೆ.

ಚಂಡೀಗಢದ ಅಂಬಾಲಾದ ಶಂಭು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ರೈತರ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರ ಗುಂಪೊಂದು ಮುರಿಯಲು ಯತ್ನಿಸಿದ್ದು, ಈ ವೇಳೆ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆಂದು ತಿಳಿದುಬಂದಿದೆ.

ಬ್ಯಾರಿಕೇಡ್‌ಗಳಿಂದ ದೂರವಿರಲು ಹರಿಯಾಣ ಪೊಲೀಸರು ಸೂಚಿಸಿದರೂ, ಕೆಲವರು ಬ್ಯಾರಿಕೇಡ್‌ಗಳ ಮೇಲೆ ನಿಂತಿದ್ದರು. ಕೆಲವರು ಕಬ್ಬಿಣದ ಬ್ಯಾರಿಕೇಡ್ ಅನ್ನು ಮುರಿದು ಸೇತುವೆಯಿಂದ ಘಗ್ಗರ್ ನದಿಗೆ ಎಸೆಯಲು ಪ್ರಯತ್ನಿಸಿದರು.

ಇದರಿಂದ ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಎಸೆದರು. ರೈತರ ಮೇಲೆ ಅಶ್ರುವಾಯು ಸೆಲ್​ ಬಳಸಲು ಡ್ರೋಣ್ ಗಳನ್ನು ಬಳಸಿಕೊಂಡಿದ್ದು ಕಂಡು ಬಂದಿತು. ಅಲ್ಲದೆ, ಹಲವರನ್ನು ಇದೇ ವೇಳೆ ವಶಕ್ಕೆ ಪಡೆದುಕೊಂಡರು.

ಕೇಂದ್ರ ಸರ್ಕಾರದ ವಿರುದ್ಧ ರೈತರ ಈ ಬೃಹತ್‌ ದಿಲ್ಲಿ ಚಲೋ ಯಾತ್ರೆಯನ್ನು ತಡೆಯಲು ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಪೊಲೀಸರು ವ್ಯಾಪಕ ವ್ಯವಸ್ಥೆಯನ್ನು ಮಾಡಿದ್ದು, ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಯಪಿ ಗೇಟ್‌ ಅನ್ನು ಸೀಲ್‌ ಮಾಡಿದ್ದಾರೆ.

ಹಲವೆಡೆ ಕಾಂಕ್ರೀಟ್‌ ಗೋಡೆಗಳು ಮತ್ತು ತಂತಿಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯುವ ಯತ್ನ ಮಾಡಲಾಗಿದೆ.

ಬೆಳಿಗ್ಗೆ 10 ಗಂಟೆಗೆ ರೈತರು ತಮ್ಮ ಚಲೋ ದೆಹಲಿ ಮೆರವಣಿಗೆಯನ್ನು ಪ್ರಾರಂಭಿಸುತ್ತಿದ್ದಂತೆ, ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಅವರು ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿಗಳು ರಾಜ್ಯ ಗಡಿಯಂತೆ ಕಾಣುತ್ತಿಲ್ಲ ಆದರೆ ಅಂತರರಾಷ್ಟ್ರೀಯ ಗಡಿಗಳಂತೆ ಕಾಣುತ್ತವೆ ಎಂದು ಹೇಳಿದರು.

ಇಂದಿಗೂ ನಾವು ರಸ್ತೆಗಳನ್ನು ನಿರ್ಬಂಧಿಸುತ್ತೇವೆ ಎಂದು ಹೇಳುತ್ತಿಲ್ಲ. ಕಳೆದ ಎರಡು-ಮೂರು ದಿನಗಳಿಂದ ಸರ್ಕಾರವೇ ರಸ್ತೆಗಳನ್ನು ನಿರ್ಬಂಧಿಸಿದೆ” ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಪಂಧೇರ್ ತಿಳಿಸಿದ್ದಾರೆ.

ಏತನ್ಮಧ್ಯೆ, ರೈತರು ದೆಹಲಿಯೊಳಗೆ ಬಂದರೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಕಾರಾಗೃಹವಾಗಿ ಪರಿವರ್ತಿಸುವ ಕೇಂದ್ರದ ಮನವಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ.

ಕೇಂದ್ರದ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ಅವರು, ‘ರೈತರ ಬೇಡಿಕೆಗಳು ಸತ್ಯದಿಂದ ಕೂಡಿವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ ರೈತರನ್ನು ಬಂಧಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ರೈತರ ಬೇಡಿಕೆಗಳು ಸಮಂಜಸವಾಗಿವೆ. ಶಾಂತಿಯುತ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ ರೈತರನ್ನು ಬಂಧಿಸುವುದು ಸರಿಯಲ್ಲ. ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವ ಕೋರಿಕೆಗೆ ತಮ್ಮ ಸರ್ಕಾರದ ಸಮ್ಮತಿ ಇಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರೈತರ ಜೊತೆಗೆ ಮಾತುಕತೆ ನಡೆಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ದೇಶದ ರೈತರು ನಮ್ಮ ಅನ್ನದಾತರು. ಅವರನ್ನು ಬಂಧಿಸುವ ಮೂಲಕ ಗಾಯಕ್ಕೆ ಉಪ್ಪು ಸವರಿದಂತಾಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಆಪ್​ ಸರ್ಕಾರದ ಬೆಂಬಲವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com