ನವದೆಹಲಿ: ಎಂಎಸ್‌ಪಿ ಬೇಡಿಕೆ, ಬೆಳೆ ವೈವಿಧ್ಯೀಕರಣ, ಕೃಷಿ ತ್ಯಾಜ್ಯದ ಸಮಸ್ಯೆ ಸೇರಿದಂತೆ ಮತ್ತಿತರ ಎಲ್ಲ ವಿಷಯಗಳ ಕುರಿತು ಚರ್ಚಿಸಲು ರೈತ ಮುಖಂಡರೊಂದಿಗೆ ಹೊಸ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಬುಧವಾರ ಹೇಳಿದ್ದಾರೆ.
ದೆಹಲಿ ಚಲೋ ಪ್ರತಿಭಟನೆಯನ್ನು ಪುನರಾರಂಭಿಸಿರುವ ರೈತರು ರಾಷ್ಟ್ರ ರಾಜಧಾನಿ ದೆಹಲಿಯತ್ತ ಮುಖ ಮಾಡಿದ್ದು, ಕೇಂದ್ರ ಕೃಷಿ ಸಚಿವರು ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾನು ಮತ್ತೊಮ್ಮೆ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)' ಕೃಷಿ ತ್ಯಾಜ್ಯ ಮತ್ತು ಬೆಲೆ ವೈವಿಧ್ಯೀಕರಣ ಸೇರಿದಂತೆ ರೈತರ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಶಾಂತಿ ಕಾಪಾಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ಮಾತುಕತೆಯ ಮೂಲಕವೇ ನಾವು ಪರಿಹಾರ ಕಂಡುಕೊಳ್ಳಬೇಕು' ಎಂದರು.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತ ಸರ್ಕಾರದ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ ನಂತರ, ಕೇಂದ್ರ ಸಚಿವ ಅರ್ಜುನ್ ಮುಂಡಾ ಮಂಗಳವಾರ ಪ್ರತಿಭಟನಾಕಾರರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. 'ನಾವು ಚರ್ಚೆಯ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು... ನಾವೆಲ್ಲರೂ ಒಟ್ಟಾಗಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು' ಎಂದು ಸಚಿವರು ಹೇಳಿದರು.
ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳು ಮತ್ತು ದಿಗ್ಬಂಧನಗಳನ್ನು ತೆಗೆದುಹಾಕಬೇಕು ಮತ್ತು ರೈತರು ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ಮಾಡಲು ಅನುವು ಮಾಡಿಕೊಡಬೇಕೆಂದು ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರೈತರನ್ನು ತಡೆಯಲು ಅಶ್ರುವಾಯು ಸಿಡಿಸಿದ ಪೊಲೀಸರು
ಈಮಧ್ಯೆ, ಕೆಲವು ರೈತರು ಬುಧವಾರ ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳತ್ತ ನುಗ್ಗುತ್ತಿರುವುದನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹರಿಯಾಣದ ಪೊಲೀಸರು ಬೆಳಗ್ಗೆ 11 ಗಂಟೆ ಸುಮಾರಿಗೆ ಅಶ್ರುವಾಯು ಪ್ರಯೋಗಿಸಿದ ನಂತರ, ಕೆಲವು ರೈತರು ರಕ್ಷಣೆಗಾಗಿ ಓಡಿಹೋದರು.
ಈಮಧ್ಯೆ, ಪಂಜಾಬ್ ಪೊಲೀಸರು ಈಗ ಶಂಭು ಗಡಿ ಕಡೆಗಿನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ರೈತರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ರಾಜಪುರದ ಬಳಿಯಿಂದ ತಿರುಗಿಸಲಾಗುತ್ತಿದೆ.
ಹರಿಯಾಣ ಪೊಲೀಸರ ನಿಯೋಜನೆ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪಂಜಾಬ್ ಕೂಡ ಶಂಭು ಗಡಿಯಲ್ಲಿ ತನ್ನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಪಟಿಯಾಲ, ಮೊಹಾಲಿ ಮತ್ತು ಫತೇಘರ್ ಸಾಹಿಬ್‌ನಲ್ಲಿ ರೈತ ಸಂಘಗಳು ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸುವ ಸಾಧ್ಯತೆಯಿರುವುದರಿಂದ ಆಸ್ಪತ್ರೆಗಳು ಸಿದ್ಧತೆಯಿಂದಿರಲು ತಿಳಿಸಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ ರೈತರು ಇಂದು ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಸಾವಿರಾರು ರೈತರು 'ದೆಹಲಿ ಚಲೋ' ಮೆರವಣಿಗೆಯನ್ನು ಪುನರಾರಂಭಿಸಿದ್ದಾರೆ.
ಫೆಬ್ರುವರಿ 13 ರಂದು ದೆಹಲಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರನ್ನು ಹರಿಯಾಣ ಗಡಿಯಲ್ಲಿಯೇ ತಡೆಹಿಡಿಯಲಾಯಿತು. ಅಂದಿನಿಂದ ಹರಿಯಾಣ ಮತ್ತು ಪಂಜಾಬ್‌ನ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ರೈತರು ಬಿಡಾರ ಹೂಡಿದ್ದಾರೆ.
Advertisement