ಅಹಮದಾಬಾದ್: ಮಾರ್ಚ್ 5 ರಂದು ನಡೆಯಲಿರುವ ತನ್ನ ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿ ರಮೇಶ್ ಚಂದನಾಗೆ ಗುಜರಾತ್ ಹೈಕೋರ್ಟ್ ಶುಕ್ರವಾರ 10 ದಿನಗಳ ಪೆರೋಲ್ ನೀಡಿದೆ.
ಕಳೆದ ವಾರ ಪೆರೋಲ್‌ಗಾಗಿ ಚಂದನಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಜನವರಿ 21ರಂದು ಗೋದ್ರಾ ಪಟ್ಟಣದ ಜೈಲಿಗೆ ಬಂದು ಎಲ್ಲಾ 11 ಅಪರಾಧಿಗಳು ಶರಣಾಗಿದ್ದರು. ಇದಾದ ನಂತರ ಪೆರೋಲ್ ಪಡೆದ ಎರಡನೇ ಅಪರಾಧಿ ಚಂದನಾ ಆಗಿದ್ದಾರೆ.
2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ ಆರೋಪಿಗಳ್ನು ದೋಷಿಗಳೆಂದು ಘೋಷಿಸಲಾಯಿತು.
'ಈ ಅರ್ಜಿಯ ಮೂಲಕ, ಅಪರಾಧಿ ಅರ್ಜಿದಾರನು ತನ್ನ ಸಹೋದರಿಯ ಮಗನ ಮದುವೆಯಲ್ಲಿ ಭಾಗವಹಿಸಲು ಪೆರೋಲ್‌ಗೆ ಮನವಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಒತ್ತಾಯಿಸಲಾದ ಆಧಾರಗಳನ್ನು ಪರಿಗಣಿಸಿ, ಅಪರಾಧಿಗೆ 10 ದಿನಗಳ ಅವಧಿಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ' ಎಂದು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಅಫಿಡವಿಟ್ ಪ್ರಕಾರ, 2008 ರಿಂದ ಜೈಲಿನಲ್ಲಿರುವ ಚಂದನಾಗೆ ಒಟ್ಟು 1,198 ದಿನಗಳ ಪೆರೋಲ್ ಮತ್ತು 378 ದಿನಗಳ ಫರ್ಲೋ ಮಂಜೂರು ಮಾಡಲಾಗಿದೆ. ಫರ್ಲೋ ಎಂಬುದು ವಿವಿಧ ಕಾರಣಗಳಿಗಾಗಿ ಕೈದಿಗಳಿಗೆ ತಾತ್ಕಾಲಿಕ ರಜೆ ನೀಡುವುದಾಗಿದೆ.
ಇದಕ್ಕೂ ಮುನ್ನ, ಪ್ರಕರಣದ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ ಅವರ ಪೆರೋಲ್ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿತ್ತು. ಹೀಗಾಗಿ, ಫೆಬ್ರುವರಿ 7 ರಿಂದ 11 ರವರೆಗೆ ಗೋಧ್ರಾ ಜೈಲಿನಿಂದ ಪೆರೋಲ್ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು.
Advertisement