ಬಿಲ್ಕಿಸ್ ಬಾನು ಪ್ರಕರಣ: 'ಸುಪ್ರೀಂ' ತೀರ್ಪನ್ನು ಸ್ವಾಗತಿಸಿದ ಪ್ರಮುಖ ಸಾಕ್ಷಿದಾರ, ಪಟಾಕಿ ಸಿಡಿಸಿ ಸಂಬಂಧಿಕರ ಸಂಭ್ರಮಾಚರಣೆ

ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿಯೊಬ್ಬರು ಸೋಮವಾರ 11 ಅಪರಾಧಿಗಳಿಗೆ ಕ್ಷಮಾಪಣೆ ನೀಡಿ ಅವಧಿಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ್ದು, ಬಾನು ಅವರಿಗೆ 'ಇಂದು ನ್ಯಾಯ ಸಿಕ್ಕಿದೆ' ಎಂದಿದ್ದಾರೆ. 
ಬಿಲ್ಕಿಸ್ ಬಾನು
ಬಿಲ್ಕಿಸ್ ಬಾನು

ದಾಹೋದ್: ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿಯೊಬ್ಬರು ಸೋಮವಾರ 11 ಅಪರಾಧಿಗಳಿಗೆ ಕ್ಷಮಾಪಣೆ ನೀಡಿ ಅವಧಿಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ್ದು, ಬಾನು ಅವರಿಗೆ 'ಇಂದು ನ್ಯಾಯ ಸಿಕ್ಕಿದೆ' ಎಂದಿದ್ದಾರೆ. ಇನ್ನೊಂದೆಡೆ ದಾಹೋದ್ ಜಿಲ್ಲೆಯ ದೇವಗಢ್ ಬರಿಯಾ ಪಟ್ಟಣದಲ್ಲಿ ಆಕೆಯ ಸಂಬಂಧಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

'ಪ್ರಕರಣದ ಸಾಕ್ಷಿಗಳಲ್ಲಿ ನಾನೂ ಒಬ್ಬ. ಈ 11 ಅಪರಾಧಿಗಳಿಗೆ ಮಹಾರಾಷ್ಟ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅವರನ್ನು ಬಿಡುಗಡೆ ಮಾಡುವ ಗುಜರಾತ್ ಸರ್ಕಾರದ ನಿರ್ಧಾರ ತಪ್ಪಾಗಿದೆ. ಅದಕ್ಕಾಗಿಯೇ ನಾವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ' ಎಂದಿದ್ದಾರೆ.

'ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದೆ ಮತ್ತು ಅಪರಾಧಿಗಳನ್ನು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಕೇಳಿದ್ದರಿಂದ ನನಗೆ ಸಂತೋಷವಾಗಿದೆ. ಇಂದು ನಮಗೆ ನ್ಯಾಯ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ' ಎಂದು ಸದ್ಯ ದೇವಗಡ ಬರಿಯಾ ಪಟ್ಟಣದಲ್ಲಿ ವಾಸಿಸುತ್ತಿರುವ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾದ ಅಬ್ದುಲ್ ರಜಾಕ್ ಮನ್ಸೂರಿ ಸುದ್ದಿಗಾರರಿಗೆ ತಿಳಿಸಿದರು.

ಬಿಲ್ಕಿಸ್ ಬಾನು ಅವರ ಕೆಲವು ದೂರದ ಸಂಬಂಧಿಗಳು ದೇವಗಢ್ ಬರಿಯಾದಲ್ಲಿ ನೆಲೆಸಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನ ಸುದ್ದಿ ದೂರದರ್ಶನದ ಪರದೆಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಅವರಲ್ಲಿ ಕೆಲವರು ಪಟಾಕಿ ಸಿಡಿಸಿ ಈ ತೀರ್ಪನ್ನು ಸ್ವಾಗತಿಸಿದರು.

ಗೋಧ್ರಾ ಗಲಭೆ ಬಳಿಕ ಭುಗಿಲೆದ್ದ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ 11 ಮಂದಿ ಅಪರಾಧಿಗಳಿಗೆ ಕ್ಷಮಾಪಣೆ ನೀಡಿ, ಅವರ ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು ಮತ್ತು ಎರಡು ವಾರಗಳಲ್ಲಿ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸೂಚಿಸಿದೆ.

ಫೆಬ್ರುವರಿ 2002 ರಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಗಲಭೆಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದರು. ಹತ್ಯೆಗೀಡಾದ ಆಕೆಯ ಏಳು ಕುಟುಂಬ ಸದಸ್ಯರಲ್ಲಿ ಅವರ ಮೂರು ವರ್ಷದ ಮಗಳೂ ಸೇರಿದ್ದಳು.

ಎಲ್ಲಾ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ಕ್ಷಮಾಪಣೆ ನೀಡಿತು ಮತ್ತು ಸನ್ನಡತೆಯ ಆಧಾರದಲ್ಲಿ ಆಗಸ್ಟ್ 15, 2022 ರಂದು ಜೈಲಿನಿಂದ ಬಿಡುಗಡೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com