ಭಾರತ ನಮ್ಮ ನೆರೆಯ ಮಿತ್ರರಾಷ್ಟ್ರ ಮತ್ತು ಯಾವತ್ತಿಗೂ ಆಪದ್ಭಾಂದವ: ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಶ್ಲಾಘನೆ

ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಪ್ರಸ್ತುತ ನಡೆಯುತ್ತಿರುವ ವಿವಾದ ಮಧ್ಯೆ, ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI), ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲಿನ ಅಧಿಕಾರಿಗಳು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಪ್ರಸ್ತುತ ನಡೆಯುತ್ತಿರುವ ವಿವಾದ ಮಧ್ಯೆ, ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI), ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲಿನ ಅಧಿಕಾರಿಗಳು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದೆ. 

ಮಾಲ್ಡೀವ್ಸ್ ಪ್ರಮುಖವಾಗಿ ಪ್ರವಾಸೋದ್ಯಮ ಅವಲಂಬಿತ ದೇಶವಾಗಿದ್ದು, ಭಾರತವನ್ನು ಮಾಲ್ಡೀವ್ಸ್‌ನ ನೆರೆಯ ಮತ್ತು ಮಿತ್ರರಾಷ್ಟ್ರಗಳಲ್ಲಿ ಒಂದಾದ ದೇಶ ಎಂದು ಉಲ್ಲೇಖಿಸಿದ ಮಾಟಿ, ದ್ವೀಪ ದೇಶದ ಇತಿಹಾಸದುದ್ದಕ್ಕೂ ಭಾರತವು ಯಾವಾಗಲೂ ವಿವಿಧ ಬಿಕ್ಕಟ್ಟುಗಳಿಗೆ ಮೊದಲು ಸ್ಪಂದಿಸುವ ದೇಶವಾಗಿದೆ ಎಂದು ಪ್ರಶಂಸಿಸಿದೆ. 

ಭಾರತವು ನಮ್ಮ ಹತ್ತಿರದ ನೆರೆಹೊರೆಯ ಮತ್ತು ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಇತಿಹಾಸ ನೋಡಿದರೆ ಭಾರತ ಯಾವಾಗಲೂ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ನಮ್ಮ ಸರ್ಕಾರ ಮತ್ತು ಭಾರತದ ಜನರು ನಮ್ಮೊಂದಿಗೆ ಇಟ್ಟುಕೊಂಡಿರುವ ನಿಕಟ ಸಂಬಂಧಕ್ಕೆ ನಾವು ಅಪಾರವಾಗಿ ಕೃತಜ್ಞರಾಗಿರುತ್ತೇವೆ ಎಂದು ಮಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಮಾಟಿ, ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಉದ್ಯಮಕ್ಕೆ ಭಾರತ ಸ್ಥಿರವಾದ ಮತ್ತು ಮಹತ್ವದ ಕೊಡುಗೆ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಮಾಲ್ಡೀವ್ಸ್ ಗೆ ಬಹಳ ಸಹಾಯ ಮಾಡಿದೆ. ಭಾರತವು ಮಾಲ್ಡೀವ್ಸ್‌ನ ಉನ್ನತ ಮಾರುಕಟ್ಟೆಗಳಲ್ಲಿ ಒಂದಾಗಿ ಉಳಿದಿದೆ ಎಂದಿದೆ. 

ನಮ್ಮ ಎರಡು ರಾಷ್ಟ್ರಗಳ ನಡುವಿನ ನಿಕಟ ಸಂಬಂಧವು ತಲೆಮಾರುಗಳವರೆಗೆ ಉಳಿಯಬೇಕು ಎಂಬುದು ನಮ್ಮ ಪ್ರಾಮಾಣಿಕ ಆಶಯವಾಗಿದೆ. ನಮ್ಮ ಉತ್ತಮ ಸಂಬಂಧದ ಮೇಲೆ ಯಾವುದೇ ರೀತಿಯ ಋಣಾತ್ಮಕ ಪರಿಣಾಮ ಬೀರಬಾರದು ಎಂಬುದು ನಮ್ಮ ಶಾಶ್ವತ ಆಶಯವಾಗಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ವಿರುದ್ಧ ಟೀಕೆ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಸುಂದರ ಕಡಲ ತೀರದ ಮರಳಿನ ಮೇಲೆ ವಾಕಿಂಗ್, ಸ್ನಾರ್ಕೆಲಿಂಗ್ ಹಾಗೂ ಸಮುದ್ರ ತಟದಲ್ಲಿ ಕುರ್ಚಿ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಸಾಹಸ ಪ್ರಿಯರಿಗೆ ಅತ್ಯಂತ ಪ್ರಶಸ್ತ ಸ್ಥಳ ಎಂದು ಬರೆದುಕೊಂಡಿದ್ದರು. ಈ ಫೋಟೊಗಳನ್ನು ನೋಡಿದ ಅದೆಷ್ಟೋ ಭಾರತೀಯರಿಗೆ ಲಕ್ಷ್ಮದ್ವೀಪಕ್ಕೂ ಒಮ್ಮೆ ಭೇಟಿ ನೀಡಬೇಕೆಂದು ಅನಿಸದೆ ಇರದು, ಪ್ರವಾಸೋದ್ಯಮಕ್ಕೆ ಪ್ರಧಾನಿ ಮೋದಿಯವರ ಭೇಟಿ ಖಂಡಿತವಾಗಿಯೂ ಉತ್ತೇಜನ ನೀಡದೇ ಇರದು.

ಆದರೆ ಇದಿಷ್ಟೇ ಆಗಿದ್ದರೆ ಅಲ್ಲಿಗೇ ಸುದ್ದಿ ನಿಲ್ಲುತ್ತಿತ್ತು. ಲಕ್ಷದ್ವೀಪದ ಮೇಲೆ ಕಣ್ಣಿಟ್ಟಿರುವ ಮಾಲ್ಡೀವ್ಸ್ ನ ಸಂಸದರೊಬ್ಬರು ಪ್ರಧಾನಿ ಮೋದಿ ಭೇಟಿ, ಅವರು ಫೋಟೋಗಳನ್ನು ಶೇರ್ ಮಾಡಿಕೊಂಡ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಮಾಲ್ಡೀವ್ಸ್ ಸಂಸದ ಜಾಹೀದ್ ರಮೀಜ್, ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸುವ ಕಲ್ಪನೆ ಭ್ರಮೆಯಾಗಿದೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದರು. ಮಾಲ್ಡೀವ್ಸ್ ಸರ್ಕಾರದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿ ಅವರ ಲಕ್ಷ್ಮದ್ವೀಪ್ ಫೋಟೊಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com