'2024 ಅಲ್ಲ.. 2029ಕ್ಕೆ ತಯಾರಿ.. ರಾಹುಲ್ ಯಾತ್ರೆ ರಾಜಕೀಯ ಪ್ರವಾಸ!; ನಿತೀಶ್ ರಿಂದ INDI ಮೈತ್ರಿಕೂಟದ ಅಂತ್ಯಸಂಸ್ಕಾರ'!

ಬಿಹಾರ ಸಿಎಂ ನಿತೀಶ್ ಕುಮಾರ್ NDA ಸೇರುವ ಮೂಲಕ INDI ಮೈತ್ರಿಕೂಟದ ಅಂತ್ಯಸಂಸ್ಕಾರ ಮಾಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ರಾಜಕೀಯ ಪ್ರವಾಸದಂತೆ ಭಾಸವಾಗುತ್ತಿದ್ದು, 2029ರ ಚುನಾವಣೆಗೆ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣಂ ಕಿಡಿಕಾರಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಂ
ಆಚಾರ್ಯ ಪ್ರಮೋದ್ ಕೃಷ್ಣಂ

ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ NDA ಸೇರುವ ಮೂಲಕ INDI ಮೈತ್ರಿಕೂಟದ ಅಂತ್ಯಸಂಸ್ಕಾರ ಮಾಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ರಾಜಕೀಯ ಪ್ರವಾಸದಂತೆ ಭಾಸವಾಗುತ್ತಿದ್ದು, 2029ರ ಚುನಾವಣೆಗೆ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣಂ ಕಿಡಿಕಾರಿದ್ದಾರೆ.

ನಿತೀಶ್ ಕುಮಾರ್ NDA ಸೇರಿರುವ ಕುರಿತು ಕಿಡಿಕಾರಿರುವ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ, ಕಾಂಗ್ರೆಸ್ ಯಾರನ್ನೂ ತಡೆಯಲು ಪ್ರಯತ್ನಿಸುವುದಿಲ್ಲ. ನೀವು ಯಾರ ಬಳಿಗೆ ಹೋಗಲು ಬಯಸುತ್ತೀರಿ ಎಂಬುದು ನಿಮ್ಮ ಆಯ್ಕೆ ಅಷ್ಟೇ.. ಕಾಂಗ್ರೆಸ್ ದೊಡ್ಡ ಪಕ್ಷ. INDI ಒಕ್ಕೂಟ ರಚನೆಯಾದಾಗಿನಿಂದ ಇದು ಗಂಭೀರ ಕಾಯಿಲೆಗಳಿಂದ ಬಳಲುತ್ತಿತ್ತು. ಅದನ್ನು ವೆಂಟಿಲೇಟರ್ ನಲ್ಲಿ ಇಟ್ಟಿದ್ದರು. ಅಂತಿಮವಾಗಿ ತೃಣಮೂಲ ಕಾಂಗ್ರೆಸ್ ಏಕಾಂಗಿ ಸ್ಪರ್ಧಿಸುವ ಘೋಷಣೆ ಮಾಡುವ ಮೂಲಕ ಅದರ ಸ್ಥಿತಿ ಗಂಭೀರವಾಗಿತ್ತು. ಇದೀಗ ನಿತೀಶ್ ಕುಮಾರ್ NDA ತೆಕ್ಕೆಗೆ ಜಾರುವ ಮೂಲಕ ಅದರ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

'ಮೈತ್ರಿಕೂಟದ ಸಮಸ್ಯೆಗಳ ಪ್ರಿಯಾಂಕಾ ಬಗೆಹರಿಸಬಹುದಿತ್ತು'
ಇನ್ನು ಈ ಹಿಂದೆಯೇ ನಿತೀಶ್ ಕುಮಾರ್ ಮೈತ್ರಿಕೂಟ ತೊರೆಯುವ ಕುರಿತು ಹೇಳಿಕೆ ನೀಡಿದ್ದ  ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಮೈತ್ರಿಕೂಟದ ಸಮಸ್ಯೆಗಳ ಪ್ರಿಯಾಂಕಾ ಬಗೆಹರಿಸಬಹುದಿತ್ತು ಎಂದಿದ್ದರು. ಪ್ರಿಯಾಂಕಾ ಗಾಂಧಿ ಅಥವಾ ಅರವಿಂದ್ ಕೇಜ್ರಿವಾಲ್ ಅವರು INDI ಮೈತ್ರಿಕೂಟವನ್ನು ಸಮನ್ವಯಗೊಳಿಸುತ್ತಿದ್ದರೆ, ಬಹುಶಃ ನಿತೀಶ್ ಕುಮಾರ್ ಈ ಮೈತ್ರಿಯನ್ನು ತೊರೆದು ಹೋಗುತ್ತಿರಲಿಲ್ಲ. ನಿತೀಶ್ ಕುಮಾರ್ ಅವರ ಮೇಲೆ ಕಣ್ಣಿಡಿ ಅಥವಾ ಅವರನ್ನು ಗೌರವಿಸಿ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಈಗ ಕಾಲ ಮೀರಿದೆ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಮತ್ತೊಂದು ಹೇಳಿಕೆ ನೀಡಿದ್ದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು, ನಿತೀಶ್ ಕುಮಾರ್ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ನಿರ್ಧಾರಗಳು ಮತ್ತು ಅವರೇ. ಕಾಂಗ್ರೆಸ್ ಈಗ ಇಡೀ ದೇಶದಲ್ಲಿ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಬೇಕು. ಲೋಕಸಭೆ ಚುನಾವಣೆಯತಹ ದೊಡ್ಡ ಯುದ್ಧವನ್ನು ಈ ಊರುಗೋಲುಗಳ ಸಹಾಯದಿಂದ ನಡೆಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಭಾರತ್ ಜೋಡೊ ಯಾತ್ರೆ ರಾಜಕೀಯ ಪ್ರವಾಸ
ಇದೇ ವೇಳೆ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇತರ ಎಲ್ಲಾ ರಾಜಕೀಯ ಪಕ್ಷಗಳು 2024 ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವಾಗ, ಕಾಂಗ್ರೆಸ್ 2029 ರ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂಬಂತೆ ತೋರುತ್ತಿದೆ. ಕಾಂಗ್ರೆಸ್‌ನಲ್ಲಿ ಕೆಲವು ಮಹಾನ್ ಮತ್ತು ಬುದ್ಧಿವಂತ ನಾಯಕರಿದ್ದಾರೆ. ಒಂದು ಕಡೆ, ಎಲ್ಲಾ ರಾಜಕೀಯ ಪಕ್ಷಗಳು 2024 ರ ಚುನಾವಣೆಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ, ಇಡೀ ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರವಾಸವನ್ನು ಮಾಡುತ್ತಿದೆ. ಭಾರತ್ ಜೊಡೋ ಯಾತ್ರೆ ಹೆಸರಲ್ಲಿ ಅವರು ರಾಜಕೀಯ ಪ್ರವಾಸ ಮಾಡುತ್ತಿರುವಂತೆ ಭಾಸವಾಗುತ್ತಿದೆ.  ವಾಸ್ತವವಾಗಿ, ನಾವು 2024ರ ಚುನಾವಣೆಯನ್ನು ಹೇಗೆ ಗೆಲ್ಲಬೇಕು ಎಂಬುದನ್ನು 2024ರ ನಂತರ ಯೋಚಿಸುತ್ತೇವೆ. 2029ರ ಚುನಾವಣೆಗೆ ನಾವು ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. 2024ಕ್ಕೆ ತಯಾರಿ ನಡೆಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಆಚಾರ್ಯ ಪ್ರಮೋದ್ ತಮ್ಮದೇ ಪಕ್ಷದ ರಾಜಕೀಯ ಕಾರ್ಯತಂತ್ರಗಾರಿಕೆ ಬಗ್ಗೆ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಯಾತ್ರೆಯ ಹೊರತಾಗಿಯೂ ಮಮತಾ ಬ್ಯಾನರ್ಜಿ ಅವರೊಂದಿಗೆ ಸೀಟು ಹಂಚಿಕೆ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಯಾವ ಸೀಟು ಹಂಚಿಕೆ ಮತ್ತು ಯಾವ ಸೀಟುಗಳು? ಕಾಂಗ್ರೆಸ್‌ಗೆ ಯಾರು ಸ್ಥಾನಗಳನ್ನು ನೀಡುತ್ತಾರೆ? ಅಂತಹ ಸಂದರ್ಭಗಳಲ್ಲಿ ಯಾರಾದರೂ ಸೀಟುಗಳನ್ನು ನೀಡುತ್ತಾರೆಯೇ? ಅವರ ಕಡೆ ಏನನ್ನಾದರೂ ಹೊಂದಿರುವವರಿಗೆ ನೀಡಲಾಗುತ್ತದೆ. ಇದು ರಾಜಕೀಯದ ಆಟವಾಗಿದೆ ಮತ್ತು ಸರಿಯಾದ ನಡೆಯನ್ನು ಮಾಡಲು ತಿಳಿದಿರುವ ಒಬ್ಬನೇ ಗೆಲುವು ಸಾಧಿಸಬಹುದು ಎಂದು ಹೇಳಿದ್ದಾರೆ.

ಅಂತೆಯೇ ಪ್ರತಿಪಕ್ಷಗಳಿಗೆ ಹೊಸ ಭರವಸೆಯಾಗಿದ್ದ INDI ಕೂಟ ಅಪಾಯದಲ್ಲಿದ್ದು, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಅಂದಹಾಗೆ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರಾಗಿದ್ದು, ಈ ಹಿಂದೆ ಕಾಂಗ್ರೆಸ್ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗುವ ನಿರ್ಧಾರದ ವಿರುದ್ಧವೂ ಕಿಡಿಕಾರಿ ಸುದ್ದಿಗೆ ಗ್ರಾಸವಾಗಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com