8 ತಿಂಗಳು ಕಾದರೂ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಏನೂ ಮಾಡಿಲ್ಲ: ಟಿಎಂಸಿ ಆಕ್ರೋಶ

ಸತತ 8 ತಿಂಗಳು ಕಾದರೂ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಕಿಡಿಕಾರಿದೆ.
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ

ಕೋಲ್ಕತಾ: ಸತತ 8 ತಿಂಗಳು ಕಾದರೂ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಕಿಡಿಕಾರಿದೆ.

ಕೋಲ್ಕತಾದಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ, 'ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (Indian National Development Inclusive Alliance-INDIA) ದಲ್ಲಿನ ವ್ಯತ್ಯಾಸಗಳಿಗೆ ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸುವಲ್ಲಿ ವಿಫಲವಾಗಿದ್ದೇ ಕಾರಣ ಎಂದು ಹೇಳಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಕೂಡ ಆಗಿರುವ ಅಭಿಷೇಕ್ ಬ್ಯಾನರ್ಜಿ, ಕಳೆದ ಎಂಟು ತಿಂಗಳಿನಿಂದ ಪದೇ ಪದೇ ಜ್ಞಾಪನೆ ಮಾಡಿದರೂ, ಸೀಟು ಹಂಚಿಕೆ ಒಪ್ಪಂದಕ್ಕೆ ಮುದ್ರೆ ಹಾಕುವಲ್ಲಿ ಕಾಂಗ್ರೆಸ್ ನಿಷ್ಕ್ರಿಯವಾಗಿದೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಕೇಸರಿ ಪಾಳಯ (BJP)ದ ಕೈಗೊಂಬೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಪದೇ ಪದೇ ದಾಳಿ ಮಾಡುತ್ತಿದ್ದಾರೆ. ಮೈತ್ರಿ ನಿಯಮಗಳ ಪ್ರಕಾರ, ನೀವು ಮಾಡುವ ಮೊದಲ ಕೆಲಸವೆಂದರೆ ಸೀಟು ಹಂಚಿಕೆ. ನಾವು ಸೀಟು ಹಂಚಿಕೆ ಸಮಸ್ಯೆಯನ್ನು ಮುಚ್ಚಲು ಎಂಟು ತಿಂಗಳು ಕಾಯುತ್ತಿದ್ದೆವು. ಆದರೆ ಕಾಂಗ್ರೆಸ್ ಸುಮ್ಮನೆ ಕುಳಿತಿತ್ತು. ಏನೂ ಮಾಡಲಿಲ್ಲ ಎಂದು ಟೀಕಿಸಿದರು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕಳೆದ ವಾರ ಘೋಷಿಸಿದ್ದರು. ಮಮತಾ ಬ್ಯಾನರ್ಜಿಯವರ ಸೋದರಳಿಯ ಕೂಡ ಆಗಿರುವ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ, ಭಾರತೀಯ ಜನತಾ ಪಕ್ಷದ ಬೇಡಿಕೆಗಳನ್ನು ಪ್ರತಿಧ್ವನಿಸುತ್ತಾ, 'ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಬೇಡಿಕೆ ಇಟ್ಟಿದ್ದಕ್ಕಾಗಿ' ಅಧಿರ್ ರಂಜನ್ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುವ ಮೂಲಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಯಾರ ಹಿತಾಸಕ್ತಿಯಿಂದ ಟಿಎಂಸಿ, ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ? ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಪಕ್ಷವು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದ INDI ಮೈತ್ರಿಕೂಟದ ಭಾಗವಾಗಿ ಮುಂದುವರಿಯುತ್ತದೆ' ಎಂದು ಪುನರುಚ್ಚರಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com