ಜಾರ್ಖಂಡ್: ಸಿಎಂ ಸ್ಥಾನಕ್ಕೆ ಹೇಮಂತ್ ಸೊರೆನ್ ರಾಜಿನಾಮೆ, ಇಡಿ ವಶಕ್ಕೆ; ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಆಯ್ಕೆ!

ಭೂ ಅಕ್ರಮ ಪ್ರಕರಣ, ಅಕ್ರಮ ಗಣಿಗಾರಿಕೆ ಸೇರಿದಂತೆ ಕೆಲ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಹೇಮಂತ್ ಸೊರೆನ್ ಇಡಿ ವಶಕ್ಕೆ, ನೂತನ ಸಿಎಂ ಆಗಿ ಚಂಪಾಯ್ ಸೊರೆನ್ ಆಯ್ಕೆ
ಹೇಮಂತ್ ಸೊರೆನ್ ಇಡಿ ವಶಕ್ಕೆ, ನೂತನ ಸಿಎಂ ಆಗಿ ಚಂಪಾಯ್ ಸೊರೆನ್ ಆಯ್ಕೆ

ಜಾರ್ಖಂಡ್: ಭೂ ಅಕ್ರಮ ಪ್ರಕರಣ, ಅಕ್ರಮ ಗಣಿಗಾರಿಕೆ ಸೇರಿದಂತೆ ಕೆಲ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಭೂ ಅಕ್ರಮ ಪ್ರಕರಣ, ಅಕ್ರಮ ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ರಾಜಭವನಕ್ಕೆ ತೆರಳಿದ ಸೊರೆನ್ ಅಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ರನ್ನು ಭೇಟಿ ಮಾಡಿ ರಾಜಿನಾಮೆ ನೀಡಿದ್ದಾರೆ. ಇಂದು ಮಧ್ಯಾಹ್ನ ರಾಂಚಿಯಲ್ಲಿರುವ ಹೇಮಂತ್ ಸೊರೆನ್ ಮನೆಗೆ ಆಗಮಿಸಿದ ಇಡಿ ಅಧಿಕಾರಿಗಳು ಸತತ ವಿಚಾರಣೆ ನಡೆಸಿದ್ದರು.

ಸುದೀರ್ಘ ವಿಚಾರಣೆ ಬಳಿಕ ಹೇಮೆಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಕಾರಣ ಬಂಧನಕ್ಕೂ ಮೊದಲು ರಾಜ್ಯಪಾಲರ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳು ಎಲ್ಲಾ ಅನುಮತಿ ಪತ್ರದೊಂದಿಗೆ ಸೊರೆನ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿ ಇದೀಗ ತಮ್ಮ ವಶಕ್ಕೆ ಪಡೆದಿದ್ದಾರೆ. 

ಭೂಹಗರಣ ಸಂಬಂಧ ಪ್ರಕರಣದಡಿಯಲ್ಲಿ ಸತತ 7 ಗಂಟೆಗಳ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಹೇಮಂತ್ ಸೊರೆನ್ ರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಡಿ ಅಧಿಕಾರಿಗಳು ನೇರವಾಗಿ ರಾಜ್ಯಪಾಲರ ಭವನಕ್ಕೆ ಕರೆದೊಯ್ದಿದ್ದು, ಈ ವೇಳೆ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಈ ಬೆಳವಣಿಗೆ ಬೆನ್ನಲ್ಲೇ ಇತ್ತ ಜಾರ್ಖಂಡ್ ರಾಜಕೀಯ ಚುರುಕುಗೊಂಡಿದ್ದು, ಇತ್ತ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುತಮತದಿಂದ ಚಂಪೈ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲೇ ಚಂಪೈ ಸೊರೆನ್ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲು ಸಾರಿಗೆ ಸಚಿವ ಚಂಪೈ ಸೊರೆನ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಚಂಪೈ ಸೊರೆನ್‌ಗೆ 41 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮುಖ್ಯಮಂತ್ರಿ ಹುದ್ದೆಗೆ ರೇಸ್ ನಲ್ಲಿದ್ದ ಹೇಮಂತ್ ಸೊರೆನ್ ಪತ್ನಿ ಕಲ್ಪನಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆ ಕುಟುಂಬ ಹಾಗೂ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವತಃ ಹೇಮಂತ್ ಸೊರೆನ್ ಕುಟುಂಬಸ್ಥರೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹೇಮಂತ್ ಸೊರೆನ್ ತಮ್ಮ ಆಪ್ತ ಹಾಗೂ ಸಂಪುಟದ ಹಿರಿಯ ಸಚಿವ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

ಇತ್ತ ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದು, ಈಗಾಗಲೇ ಬೆಂಬಲತಿ ಶಾಸಕರೊಂದಿಗೆ ಚಂಪೈ ಸೊರೆನ್ ಅವರು ರಾಜ್ಯಪಾಲರ ಭೇಟಿ ಮಾಡಿ ಪ್ರಮಾಣ ವಚನಕ್ಕೆ ಅನುಮತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com