
ಪುಣೆ: ಪುಣೆಯ ಲೋನಾವಾಲಾ ಡ್ಯಾಂ ಬಳಿ ನೀರಿನಲ್ಲಿ ಕೊಚ್ಚಿ ಹೋದ ಕುಟುಂಬದ ದುರಂತ ಹಸಿರಾಗಿರುವಂತೆಯೇ ಮತ್ತದೇ ಮಹಾರಾಷ್ಟ್ರದಲ್ಲಿ ಮತ್ತೊಂದು ದುರಂತ ಬೆಳಕಿಗೆ ಬಂದಿದೆ.
ಮಳೆ ಮತ್ತು ಪ್ರವಾಹದಿಂದ ತುಂಬಿ ತುಳುಕುವ ಜಲಪಾತಗಳು ನೋಡಲೆಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಕೂಡ.. ಈ ಬಗ್ಗೆ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುವುದಿಲ್ಲ.
ಪದೇ ಪದೇ ಪ್ರಕೃತಿಗೆ ಸವಾಲೆದೆ ಸಾವನ್ನು ಆಹ್ವಾನಿಸುತ್ತಾರೆ. ಅಂತಹುದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, ಯುವಕನೋರ್ವ ತುಂಬಿ ಹರಿಯುತ್ತಿದ್ದ ಜಲಪಾತಕ್ಕೆ ಧುಮುಕಿ ಕೊಚ್ಚಿಕೊಂಡು ಹೋಗಿದ್ದಾನೆ.
ಮಹಾರಾಷ್ಟ್ರದ ತಮ್ಹಿನಿ ಘಾಟ್ ನಲ್ಲಿ ಜಲಪಾತದಲ್ಲಿ ಈ ಘಟನೆ ನಡೆದಿದ್ದು, ತುಂಬಿ ಹರಿಯುತ್ತಿದ್ದ ಜಲಪಾತದಲ್ಲಿ ಈಜಲು ಹೋದ ಯುವಕನೋರ್ವ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕ ನೀರಿಗೆ ಜಿಗಿದು ಈಜಿ ಮೇಲೆ ಬರಲಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕನನ್ನು ಸ್ವಪ್ನಿಲ್ ಧಾವ್ಡೆ ಎಂದು ಗುರುತಿಸಲಾಗಿದ್ದು, ಈತ ತನ್ನ ಇತರ 32 ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ. ಈ ವೇಳೆ ತಮ್ಹಿನಿ ಘಾಟ್ ನ ಅಪಾಯಕಾರಿ ಜಲಪಾತದಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾನೆ.
ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸ್ವಪ್ನಿಲ್ ನನ್ನು ಹಿಡಿಯಲು ಆತನ ಸ್ನೇಹಿತರು ಯತ್ನಿಸಿದ್ದಾರೆಯಾದರೂ ನೀರಿನ ರಭಸ ಹೆಚ್ಚಾಗಿದ್ದರಿಂದ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ನೋಡ ನೋಡುತ್ತಲೇ ನೀರಿನಲ್ಲಿ ಕೊಚ್ಚಿಕೊಂಡು ಹೋದ ಸ್ವಪ್ನಿಲ್ ಕಣ್ಮರೆಯಾಗಿದ್ದಾನೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement