
ನವದೆಹಲಿ: ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಶಿಸ್ತು ಉಲ್ಲಂಘನೆ ವಿಚಾರಣೆ ಬಾಕಿಯಿರುವಂತೆ ಬೆಂಗಳೂರಿನ ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಜೂನ್ 6 ರಂದು ದೆಹಲಿಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಂಗನಾ ಅವರ ಕಪಾಳಕ್ಕೆ ಹೊಡೆದಿದ್ದ ಘಟನೆ ನಂತರ ಕೌರ್ ಅವರನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಅಮಾನತುಗೊಳಿಸಿತು. ಸಿಐಎಸ್‌ಎಫ್ ದೂರಿನ ಮೇರೆಗೆ ಕಾನ್‌ಸ್ಟೆಬಲ್ ವಿರುದ್ಧ ಪೊಲೀಸ್ ಎಫ್‌ಐಆರ್ ಕೂಡ ದಾಖಲಾಗಿದೆ. ಕೌರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಶಿಸ್ತು ಉಲ್ಲಂಘನೆ ಬಾಕಿ ಇರುವಂತೆ ಅವರನ್ನು ಬೆಂಗಳೂರಿನ 10 ನೇ ಮೀಸಲು ಬೆಟಾಲಿಯನ್‌ಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಯುತ ತನಿಖೆ ನಿಟ್ಟಿನಲ್ಲಿ ಘಟನೆ ನಡೆದ ಕೂಡಲೇ ಅವರನ್ನು ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಕಮಾಂಡೆಂಟ್ ದರ್ಜೆಯ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿದ್ದು, ಆ ದಿನ ವಿಮಾನ ನಿಲ್ದಾಣದಲ್ಲಿದ್ದ ಕಾನ್‌ಸ್ಟೆಬಲ್, ಆಕೆಯ ಸಹೋದ್ಯೋಗಿಗಳು, ಶಿಫ್ಟ್ ಇನ್‌ಚಾರ್ಜ್ ಮತ್ತು ಕೆಲವು ವಿಮಾನ ನಿಲ್ದಾಣದ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆಗೆ ಸ್ವಲ್ಪ ಸಮಯ ಹಿಡಿಯಲಿದ್ದು, ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಪಂಜಾಬ್‌ನ ಕಪುರ್ತಲಾ ಜಿಲ್ಲೆಯವರಾದ ಕೌರ್ ಅವರು 2009 ರಲ್ಲಿ CISF ಗೆ ಸೇರ್ಪಡೆಗೊಂಡಿದ್ದರು. 2021 ರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಅದರ ವೈಮಾನಿಕ ಭದ್ರತಾ ಗುಂಪಿನೊಂದಿಗೆ ಇದ್ದಾರೆ. ಅವರಿಗೆ ಇದುವರೆಗೂ ಫೋರ್ಸ್‌ನಲ್ಲಿ ಯಾವುದೇ ವಿಚಾರಣೆ ಅಥವಾ ಶಿಕ್ಷೆಯನ್ನು ನೀಡಲಾಗಿಲ್ಲ. ಆಕೆಯ ಪತಿಯನ್ನೂ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು.
ದೇಶದಲ್ಲಿ ನಡೆದ ರೈತರ ಪ್ರತಿಭಟನೆಗಳ ಬಗ್ಗೆ ಕಂಗನಾ ಅವರ ನಿಲುವಿನ ಬಗ್ಗೆ ಅಸಮಾಧಾನಗೊಂಡು ಕಪಾಳ ಮೋಕ್ಷ ಮಾಡಿರುವುದಾಗಿ ಕೌರ್ ಹೇಳಿದ್ದಾರೆ. 38 ವರ್ಷದ ಕಂಗನಾ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
Advertisement