
ರಾಂಚಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹೇಮಂತ್ ಸೊರೆನ್ ಜಾಮಿನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಕೇಳಿಬರುತ್ತಿದ್ದು, ಹೇಮಂತ್ ಸೊರೆನ್ ಮತ್ತೆ ಜಾರ್ಖಂಡ್ ಸಿಎಂ ಆಗಲು ಸಿದ್ಧತೆ ನಡೆಸಿದ್ದಾರೆ.
ಹೌದು.. ಜಾರಿ ನಿರ್ದೇಶನಾಲಯ (ಇಡಿ) ಬಲೆಗೆ ಬಿದ್ದು ಜೈಲು ಸೇರಿದ್ದ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಸಜ್ಜಾಗಿದ್ದು, ಜಾರ್ಖಂಡ್ ಮುಕ್ತಿ ಮೋರ್ಛಾ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೈತ್ರಿ ಕೂಟ ಹೇಮಂತ್ ಸೊರೇನ್ ಅವರನ್ನು ಮತ್ತೆ ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಹೀಗಾಗಿ ಹೇಮಂತ್ ಸೊರೇನ್ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಾಲಿ ಸಿಎಂ ಚಂಪೈ ಸೊರೆನ್ ಬಂಡಾಯವೇಳಲು ಕಾರಣವಾಗಿದೆ.
2024ರ ಜನವರಿಯಲ್ಲಿ ಹೇಮಂತ್ ಸೊರೆನ್ ಸಿಎಂ ಪಟ್ಟದಿಂದ ಕೆಳಗೆ ಇಳಿದಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರುವ ಹೇಮಂತ್ ಸೊರೆನ್ ಅವರ ನಿವಾಸದ ಬಳಿಯ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಹಣ ಸಿಕ್ಕ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೇಮಂತ್ ಸೊರೆನ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿ ನಾಪತ್ತೆಯಾಗಿದ್ದ ಹೇಮಂತ್ ಸೊರೆನ್, ರಾಂಚಿಯಲ್ಲಿ ಪ್ರತ್ಯಕ್ಷರಾಗಿದ್ದರು. ಹೇಮಂತ್ ಸೊರೆನ್ ಬಂಧನಕ್ಕೀಡಾಗುವ ಮುನ್ನ ತಮ್ಮ ಕುಟುಂಬದ ಆಪ್ತ ಚಂಪೈ ಸೊರೇನ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದರು.
ಹೇಮಂತ್ ಸೊರೇನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಾರಿ ನಿರ್ದೇಶನಾಲಯ ಅವರನ್ನು ಬಂಧನ ಮಾಡಿತ್ತು. ಹೇಮಂತ್ ಬಂಧನ ಬೆನ್ನಲ್ಲೇ ಚಂಪೈ ಸೊರೆನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಅತ್ತ ಹೇಮಂತ್ ಸೊರೇನ್ ನ್ಯಾಯಾಂಗ ಸಮರ ಆರಂಭವಾಗಿತ್ತು. ವಿಶೇಷ ನ್ಯಾಯಾಲಯ, ಜಾರ್ಖಂಡ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಜಾಮೀನಿಗಾಗಿ ನಿರಂತರ ಹೋರಾಟ ನಡೆಸಿದ್ದ ಹೇಮಂತ್ ಸೊರೇನ್ ಅವರಿಗೆ ಕಳೆದ ವಾರವಷ್ಟೇ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು.
ನ್ಯಾಯಾಲಯವು ‘ಮೇಲ್ನೋಟಕ್ಕೆ ಹೇಮಂತ್ ಸೊರೇನ್ ತಪ್ಪಿತಸ್ಥರಲ್ಲ’ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿತ್ತು. ಇದೀಗ ಜೈಲಿನಿಂದ ಬಿಡುಗಡೆಯಾದ ಕೂಡಲೇ ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ ಪಟ್ಟಕ್ಕೇರಲು ಸಿದ್ದತೆ ನಡೆಸಿದ್ದಾರೆ.
ಸ್ವಪಕ್ಷೀಯರು, ಕುಟುಂಬಸ್ತರ ವಿರುದ್ಧವೇ ''ಸಿಎಂ'' ಚಂಪೈ ಸೊರೆನ್‌ಗೆ ಸಿಟ್ಟು?
ಇನ್ನು ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಸಲಾಗುತ್ತಿದೆ ಎಂಬ ಕಾರಣಕ್ಕೇ ಚಂಪೈ ಸೊರೆನ್ ಸ್ವಪಕ್ಷೀಯರು, ಕುಟುಂಬಸ್ತರ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ತಮ್ಮನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ತೀರ್ಮಾನಕ್ಕೆ ಚಂಪೈ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರವನ್ನು ತಮಗಾದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಅದಾಗ್ಯೂ ಚಂಪೈ ಸೊರೇನ್ ಅವರನ್ನು ಸಮಾಧಾನ ಪಡಿಸಲು ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಛಾ ಪಕ್ಷದ ಕಾರ್ಯ ನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಹೇಮಂತ್ ಸೊರೇನ್ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದರೆ, ಅವರು ನವೆಂಬರ್ 15, 2000 ರಂದು ಬಿಹಾರದಿಂದ ಬೇರ್ಪಟ್ಟ ಜಾರ್ಖಂಡ್‌ನ 13 ನೇ ಮುಖ್ಯಮಂತ್ರಿಯಾಗಲಿದ್ದಾರೆ.
Advertisement