
ಲಖನೌ: ಶಾಲಾ ಆಡಳಿತ ಮಂಡಳಿ ನಿರ್ಧಾರಕ್ಕೆ ವಿರುದ್ಧವಾಗಿ ಕಚೇರಿಗೆ ಆಗಮಿಸಿ ಕುಳಿತಿದ್ದ ಪ್ರಾಂಶುಪಾಲೆಯನ್ನೇ ಹೊರದಬ್ಬಿದ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.
ಹೌದು.. ಶಾಲಾ ಪ್ರಾಂಶುಪಾಲೆಯನ್ನೇ ಶಾಲಾ ಆಡಳಿತ ಮಂಡಳಿ ಬಲವಂತವಾಗಿ ಎಳೆದಾಡಿ ಹೊರದಬ್ಬಿದ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಗರ್ಲ್ಸ್ ಹೈಸ್ಕೂಲ್ನ ಪ್ರಾಂಶುಪಾಲಕಿ ಪಾರುಲ್ ಸೊಲೊಮನ್ ಅವರನ್ನು ಆಡಳಿತ ಮಂಡಳಿಯು ಬಲವಂತವಾಗಿ ಹೊರದಬ್ಬಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ, ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕೊಠಡಿಗೆ ತೆರಳಿ ಪ್ರಾಂಶುಪಾಲೆಯನ್ನು ಕುರ್ಚಿಯಿಂದ ಬಲವಂತವಾಗಿ ಎಳೆದು ಹೊರಹಾಕಿದ್ದಾರೆ. ಇದಲ್ಲದೇ ಅದೇ ಸಮಯದಲ್ಲಿ ಹೊಸ ಪ್ರಾಂಶುಪಾಲರನ್ನು ನೇಮಕ ಮಾಡಿ ಅವರನ್ನು ಕುರ್ಚಿಯಲ್ಲಿ ಕೂರಿಸಿ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದಾರೆ.
ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸಿ ಆಕೆಯ ಕುರ್ಚಿಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಪ್ರಾಂಶುಪಾಲೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಬಲವಂತವಾಗಿ ಎಳೆದ್ಯೊಯ್ದು ಹೊರಹಾಕಲಾಗಿದೆ. ಬಳಿಕ ಹೊಸ ಪ್ರಾಶುಂಪಾಲರನ್ನು ನೇಮಕ ಮಾಡಲಾಗಿದೆ. ಈ ಘಟನೆಯು ಶಿಕ್ಷಣದ ಸ್ಥಿತಿ ಮತ್ತು ಶಾಲಾ ಆಡಳಿತಗಾರರ ವರ್ತನೆಯ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿದೆ.
ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಾಶುಂಪಾಲೆ ಪಾರುಲ್ ಸೊಲೊಮನ್ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.
Advertisement