
ಲಖನೌ: 120ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿದ್ದ ಹತ್ರಾಸ್ ಕಾಲ್ತುಳಿತ ಪ್ರಕರಣದ ಹಿಂದೆ ''ಕಾಣದ ಕೈಗಳ ಕೈವಾಡ''ವಿರಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಅಭಿಪ್ರಾಯಪಟ್ಟಿದೆ.
ಹೌದು.. ಹತ್ರಾಸ್ ಕಾಲ್ತುಳಿತ ಪ್ರಕರಣ ದೊಡ್ಡ ಸಂಚಿನ ಭಾಗವಾಗಿರಬಹುದು ಎಂದು ವಿಶೇಷ ತನಿಖಾ ದಳ ಅಭಿಪ್ರಾಯಪಟ್ಟಿದ್ದು, ಇದಕ್ಕೆ ಇಂಬು ನೀಡುವಂತೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಥಳೀಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (Sub-divisional Magistrate-SDM) ಅಧಿಕಾರಿಯನ್ನು ಅಮಾನತು ಮಾಡಿದೆ.
ಹತ್ರಾಸ್ ಕಾಲ್ತುಳಿತದ ಬಗ್ಗೆ ಎಸ್‌ಐಟಿ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಥಳೀಯ ಎಸ್‌ಡಿಎಂ ಮಾತ್ರವಲ್ಲದೇ ಸರ್ಕಲ್ ಅಧಿಕಾರಿ ಮತ್ತು ಇತರ ನಾಲ್ವರ ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಿದೆ. ಸರ್ಕಾರದ ಈ ನಡೆಯೇ ಘಟನೆಯ ಹಿಂದೆ “ದೊಡ್ಡ ಪಿತೂರಿ” ಇರಬಹುದು ಎಂದು ಹೇಳಲಾಗುತ್ತಿದೆ.
SIT ಸಲ್ಲಿಕೆ ಮಾಡಿರುವ ವರದಿಯಲ್ಲಿ ಜುಲೈ 2 ರಂದು 121 ಮಂದಿಯನ್ನು ಬಲಿ ಪಡೆದ ಘಟನೆಗೆ ಕಾರಣವಾದ ಸ್ಥಳೀಯ ಆಡಳಿತದ ಲೋಪಗಳನ್ನು ಎತ್ತಿ ತೋರಿಸಿದ್ದು, ಕಾಲ್ತುಳಿತಕ್ಕೆ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರು ಜನಸಂದಣಿಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಿರಲಿಲ್ಲ.
ಇದರ ಬಗ್ಗೆ ಗಮನ ಹರಿಸಬೇಕಾದ್ದು ಆಡಳಿತದ ಜವಾಬ್ದಾರಿಯಾಗಿತ್ತು. ಇದನ್ನು ಅಧಿಕಾರಿಗಳು ಮಾಡಿಲ್ಲ. ಸ್ಥಳೀಯ ಪೊಲೀಸರು ಮತ್ತು ಆಡಳಿತವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲು ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಎಸ್‌ಐಟಿ ವರದಿಯ ಆಧಾರದ ಮೇಲೆ ಎಸ್‌ಡಿಎಂ, ಸರ್ಕಲ್ ಆಫೀಸರ್, ತಹಸೀಲ್ದಾರ್ ಸೇರಿದಂತೆ ಆರು ಮಂದಿಯನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ.
Advertisement