
ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಬಿಜೆಪಿ ಆಡಳಿತವಿರುವ ಉತ್ತರಾಖಂಡದ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವನ್ನು ಕಾಂಗ್ರೆಸ್ ಶ್ಲಾಘಿಸಿದ್ದು, ಈ ಫಲಿತಾಂಶ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತವಾರಣವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಎಸ್ ಪಿ ಮತ್ತು ಬಿಜೆಪಿ ಕೊಳಕು ತಂತ್ರಗಳ ಮೂಲಕ ಮಂಗ್ಳೂರ್ ಕಿತ್ತುಕೊಂಡಿದ್ದರು. ಬದರೀನಾಥ್ ನಲ್ಲಿ ಕಾಂಗ್ರೆಸ್ ಶಾಸಕ ಲೋಕಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈ ಎರಡೂ ಕ್ಷೇತ್ರಗಳ ಫಲಿತಾಂಶ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.
ಇನ್ನೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಎಲ್ಲಾ ಕುತಂತ್ರಗಳು ದಯನೀಯವಾಗಿ ವಿಫಲವಾಗಿವೆ. "ಆಪರೇಷನ್ ಕಮಲದ ಭಾಗವಾಗಿ ಆಮಿಷಕ್ಕೆ ಒಳಗಾಗಿದ್ದ ಪಕ್ಷೇತರರು ಗೆದ್ದಿದ್ದ ಎರಡು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಇದು ಕಾಂಗ್ರೆಸ್‌ನ ಗಮನಾರ್ಹ ಚೇತರಿಕೆ ಎಂದಿದ್ದಾರೆ.
ಕಾಂಗ್ರೆಸ್‌ನ ಹಿಮಾಚಲ ಪ್ರದೇಶ ಉಸ್ತುವಾರಿ ರಾಜೀವ್ ಶುಕ್ಲಾ, ಹಿಮಾಚಲ ಪ್ರದೇಶದ 3 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತೆ 40 ಸ್ಥಾನಕ್ಕೆ ಮರಳಿದೆ. ಇದು ನಮ್ಮ ಸರ್ಕಾರಕ್ಕೆ ಸ್ಥಿರತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
Advertisement