
ಮುಂಬೈ: ಅಧಿಕಾರ ಮತ್ತು ಸವಲತ್ತುಗಳ ದುರುಪಯೋಗ ಆರೋಪದ ಮೇಲೆ ವಿವಾದದ ಕೇಂದ್ರಬಿಂದುವಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, 2007 ರಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಫಿಟ್‌ನೆಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದರು ಎಂದು ಸಂಸ್ಥೆಯ ನಿರ್ದೇಶಕರು ಸೋಮವಾರ ತಿಳಿಸಿದ್ದಾರೆ.
ಪೂಜಾ ಖೇಡ್ಕರ್ 2007ರಲ್ಲಿ ಕಾಲೇಜಿಗೆ ಸೇರಿದಾಗ ಸಲ್ಲಿಸಿದ ವೈದ್ಯಕೀಯ ಫಿಟ್‌ನೆಸ್ ಪ್ರಮಾಣ ಪತ್ರದಲ್ಲಿ ಯಾವುದೇ ದೈಹಿಕ ಅಥವಾ ಮಾನಸಿಕ ಅಂಗವೈಕಲ್ಯದ ಉಲ್ಲೇಖವಿಲ್ಲ. ಅವರು, NT(ಅಲೆಮಾರಿ ಬುಡಕಟ್ಟು) ವರ್ಗ ಮತ್ತು ವಂಜಾರಿ ಸಮುದಾಯದಿಂದ ಬಂದವರು ಎಂದು ತೋರಿಸುವ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಅವರು ಜಾತಿ ಪ್ರಮಾಣಪತ್ರ ಮತ್ತು ಕೆನೆಪದರವಲ್ಲದ ಪ್ರಮಾಣ ಪತ್ರ ಸಲ್ಲಿಸಿದ್ದರು ಎಂದು ಪುಣೆಯ ಕಾಶಿಬಾಯಿ ನವಲೆ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಅರವಿಂದ ಭೋರೆ ಮರಾಠಿ ಟಿವಿ ಚಾನೆಲ್ ಎಬಿಪಿ ಮಜಾಗೆ ತಿಳಿಸಿದ್ದಾರೆ.
ಪೂಜಾ ಖೇಡ್ಕರ್ ಸಲ್ಲಿಸಿದ ಆಕೆಯ ಹಿಂದಿನ ಕಾಲೇಜಿನ ಲೀವಿಂಗ್ ಪ್ರಮಾಣ ಪತ್ರದ ಪ್ರಕಾರ, ಆಕೆಯ ಜನ್ಮ ದಿನಾಂಕ ಜನವರಿ 16, 1990 ಎಂದು ನಮೂದಿಸಲಾಗಿದೆ. 34 ವರ್ಷದ ಐಎಎಸ್ ಅಧಿಕಾರಿ ತನ್ನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸ್ ಆಗಲು ಮೋಸದ ವಿಧಾನ ಬಳಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ದೈಹಿಕ ವಿಕಲಾಂಗತೆ ಹಾಗೂ ತಾನು ಒಬಿಸಿಗೆ ಸೇರಿದವಳು ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಉಮೇದುವಾರಿಕೆ ಖಚಿತತೆ ಮತ್ತು ನಂತರ ಸೇವೆಗೆ ಆಯ್ಕೆಗಾಗಿ ಅವರು ಸಲ್ಲಿಸಿರುವ ಎಲ್ಲಾ ದಾಖಲೆಗಳನ್ನು ಕೇಂದ್ರವು ರಚಿಸಿರುವ ಏಕ-ಸದಸ್ಯ ಸಮಿತಿಯು ಮರುಪರಿಶೀಲಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರವಾನಗಿ ಪಡೆದ ಗನ್ ದುರ್ಬಳಕೆ ಆರೋಪದ ಮೇಲೆ ಪುಣೆ ಪೊಲೀಸರು ಆಕೆಯ ತಾಯಿ ಮನೋರಮಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಹ್ಮದ್‌ನಗರದ ಭಾಲ್ಗಾಂವ್ ಗ್ರಾಮದ ಸರಪಂಚ್ ಆಗಿರುವ ಮನೋರಮಾ ಖೇಡ್ಕರ್ ಅವರಿಗೆ ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. 2023ರಲ್ಲಿ ವರದಿಯಾದ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ಜಮೀನಿನ ವಿವಾದದ ಸಂದರ್ಭದಲ್ಲಿ ಮನೋರಮಾ ರೈತನೊಬ್ಬನ ಮೇಲೆ ಪಿಸ್ತೂಲ್ ಝಳಪಿಸುತ್ತಿರುವುದು ಇತ್ತೀಚೆಗೆ ಕಾಣಿಸಿಕೊಂಡಿದೆ.
Advertisement