
ರಾಯಗಢ: ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಪುಣೆ ಗ್ರಾಮಾಂತರ ಪೊಲೀಸರು ಗುರುವಾರ ರಾಯಗಡ ಜಿಲ್ಲೆಯ ಮಹಾಡ್‌ನಲ್ಲಿ ಬಂಧಿಸಿದ್ದಾರೆ.
ಪುಣೆಯ ಮುಲ್ಶಿ ತಾಲೂಕಿನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮನೋರಮಾ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಬಂದೂಕಿನಿಂದ ರೈತನಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ರೈತ ಪಂಢರಿನಾಥ್ ಪಾಸಲ್ಕರ್ (65ವ) ನೀಡಿದ ದೂರಿನ ಆಧಾರದ ಮೇಲೆ ಪುಣೆ ಗ್ರಾಮಾಂತರದ ಪೌಡ್ ಪೊಲೀಸ್ ಠಾಣೆಯಲ್ಲಿ ಪೂಜಾ ಅವರ ತಾಯಿ ಮನೋರಮಾ, ತಂದೆ ದಿಲೀಪ್ ಖೇಡ್ಕರ್, ಹವೇಲಿಯ ಅಂಬಿ ಗ್ರಾಮದ ಅಂಬಾದಾಸ್ ಖೇಡ್ಕರ್ ಮತ್ತು ಇತರ ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ಎಫ್‌ಐಆರ್ ದಾಖಲಾದಾಗಿನಿಂದ ಪುಣೆ ಗ್ರಾಮಾಂತರ ಪೊಲೀಸರು ಮನೋರಮಾ ಅವರ ಹುಡುಕಾಟ ನಡೆಸುತ್ತಿದ್ದರು. ಮನೋರಮಾ ಖೇಡ್ಕರ್ ಅವರನ್ನು ರಾಯಗಢ ಜಿಲ್ಲೆಯ ಮಹಾದ್‌ನಿಂದ ಬಂಧಿಸಿ ಪುಣೆಗೆ ಕರೆತರಲಾಗಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಬಂಧಿಸಲಾಗುವುದು ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
Advertisement