
ಡೆಹ್ರಾಡೂನ್: ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಅತ್ತ ದೇವಭೂಮಿ ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದೆ.
ಹೌದು.. ಉತ್ತರಾಖಂಡದ ಕೇದಾರನಾಥ ನಡಿಗೆ ಮಾರ್ಗದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ನಿರಂತರ ಭಾರಿ ಮಳೆಯಿಂದಾಗಿ ಕೇದರಾನಾಥದ ಗೌರಿಕುಂಡ್ ಬಳಿ ಮಂದಾಕಿನಿ ನದಿ ಉಕ್ಕಿ ಹರಿಯುತ್ತಿದ್ದು, ನೀರಿನ ಮಟ್ಟದ ದಿಢೀರ್ ಏರಿಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಚಾರ್ಧಾಮ ಯಾತ್ರೆ ಸ್ಥಗಿತಗೊಳಿಸಿದೆ.
ಭಾರಿ ಮಳೆ ಪರಿಣಾಮ ಲಿಂಚೋಲಿ ಮತ್ತು ಮಹಾಬಲಿ ಬಳಿ ಭೂಕುಸಿತ ಉಂಟಾಗಿ ಕಲ್ಲುಗಳು ಬೀಳುತ್ತಿವೆ. ಗೌರಿಕುಂಡ್‌ನಲ್ಲಿನ ಪವಿತ್ರ ಬಿಸಿ ಕೊಳ ಕೊಚ್ಚಿಹೋಗಿದ್ದು, ಕೇದಾರನಾಥ ನಡಿಗೆ ಮಾರ್ಗದಲ್ಲಿ ಬಂಡೆಗಳು ಕುಸಿದಿವೆ. ಗೌರಿಕುಂಡ್ ಮತ್ತು ಸೋನ್‌ಪ್ರಯಾಗದಲ್ಲಿ ಜನರು ಭಯಭೀತರಾಗಿ ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರುದ್ರಪ್ರಯಾಗ ಡಿಎಂ ಸೌರಭ್ ಗಹರ್ವಾರ್ ಆದೇಶದ ಮೇರೆಗೆ, ಚಾರ್ಧಾಮ್ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ರಸ್ತೆ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಇನ್ನು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಂದಾಕಿನಿ ನದಿ ತಟದಲ್ಲಿ SDRF ಮತ್ತು ಸೈನಿಕರು ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದವರನ್ನು ಸೋನಪ್ರಯಾಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರವಾಹದಿಂದಾಗಿ 150 ರಿಂದ 200 ಯಾತ್ರಾರ್ಥಿಗಳು ಸ್ಥಳದಲ್ಲೇ ಸಿಲುಕಿಕೊಂಡಿದ್ದು, ಕಾಲುದಾರಿಯ 30 ಮೀಟರ್ ಭಾಗ ಹಾಳಾಗಿದೆ.
ಇಬ್ಬರ ಸಾವು
ಇನ್ನು ಘನ್ಸಾಲಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರನ್ನು ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ ಸಾವಿನ ಕುರಿತು ಈ ವರೆಗೂ ಉತ್ತರಾಖಂಡ ಸರ್ಕಾರ ಸ್ಪಷ್ಟನೆ ನೀಡಿಲ್ಲ.
Advertisement