
ನವದೆಹಲಿ: ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕ ಹಾಗೂ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರಕ್ಕೆ ಪೂಜೆ ಸಲ್ಲಿಸಿದ ಬಳಿಕ ತಿಹಾರ್ ಜೈಲಿನ ಅಧಿಕಾರಿಗಳ ಮುಂದೆ ಶರಣಾಗುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.
ಏಳು ಹಂತದ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ ಜೂನ್ 2 ರಂದು ಕೇಜ್ರಿವಾಲ್ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಜೂನ್ 1 ರಂದು ಕೊನೆಯ ಹಂತದ ಮತದಾನ ಮುಗಿದಿದೆ.
'ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ, ನಾನು 21 ದಿನಗಳ ಚುನಾವಣಾ ಪ್ರಚಾರಕ್ಕಾಗಿ ಜೈಲಿನಿಂದ ಹೊರಬಂದಿದ್ದೇನೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು' ಎಂದು ಅವರು 'X' ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
'ಇಂದು ನಾನು ತಿಹಾರ್‌ಗೆ ಹೋಗಿ ಶರಣಾಗುತ್ತೇನೆ. ನಾನು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಡುತ್ತೇನೆ. ಮೊದಲು ನಾನು ರಾಜ್ ಘಾಟ್‌ಗೆ ಹೋಗಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸುತ್ತೇನೆ. ಅಲ್ಲಿಂದ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತೆರಳಿ ಹನುಮಂತನ ಆಶೀರ್ವಾದ ಪಡೆಯುತ್ತೇನೆ. ಅಲ್ಲಿಂದ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರನ್ನು ಭೇಟಿ ಮಾಡಿದ ನಂತರ ತಿಹಾರ್‌ಗೆ ತೆರಳುತ್ತೇನೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
'ನೀವೆಲ್ಲರೂ ನಿಮ್ಮನ್ನು ನೋಡಿಕೊಳ್ಳಿ. ನಾನು ನಿಮ್ಮ ಬಗ್ಗೆ ಚಿಂತಿಸುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಜೈಲಿನಲ್ಲಿಯೂ ಸಂತೋಷವಾಗಿರುತ್ತಾರೆ. ಜೈ ಹಿಂದ್' ಎಂದು ಬರೆದಿದ್ದಾರೆ.
ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಇನ್ನೂ ಏಳು ದಿನಗಳ ಕಾಲ ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವೈದ್ಯಕೀಯ ಕಾರಣಕ್ಕೆ ಏಳು ದಿನಗಳವರೆಗೆ ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿ ಮಾಡಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ನಿರಾಕರಿಸಿತ್ತು.
Advertisement