
ನವದೆಹಲಿ: ಲೋಕಸಭೆ ಚುನಾವಣೆಗೆ ನಡೆದ ಮತದಾನ ಶನಿವಾರ ಮುಕ್ತಾಯಗೊಂಡಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಎನ್‌ಡಿಎಗೆ ಸ್ಪಷ್ಟವಾದ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಎಎಪಿಯ ಸೋಮನಾಥ ಭಾರ್ತಿ ಸಮೀಕ್ಷೆಗಳನ್ನು ಅಲ್ಲಗಳೆದಿದ್ದು, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ ಎಂದಿದ್ದಾರೆ.
ದೆಹಲಿ ಲೋಕಸಭೆ ಸ್ಥಾನಕ್ಕೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಶಾಸಕ, ಮತ ಎಣಿಕೆ ನಡೆಯುವ ಮಂಗಳವಾರದಂದು ಎಲ್ಲ ಎಕ್ಸಿಟ್ ಪೋಲ್‌ಗಳ ಭವಿಷ್ಯ ತಪ್ಪು ಎಂದು ಸಾಬೀತಾಗಲಿದೆ ಮತ್ತು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ದೆಹಲಿಯ ಏಳು ಸ್ಥಾನಗಳಲ್ಲಿ ಕನಿಷ್ಠ ಆರನ್ನಾದರೂ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಆದರೆ, ಭಾರ್ತಿ ಅವರು ಇಂಡಿಯಾ ಮೈತ್ರಿಕೂಟವೇ ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದಿದ್ದಾರೆ. ದೆಹಲಿಯಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮೂರರಲ್ಲಿ ಸ್ಪರ್ಧಿಸಿದೆ.
'ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ! ಎಲ್ಲ ಎಕ್ಸಿಟ್ ಪೋಲ್‌ಗಳು ಜೂನ್ 4 ರಂದು ತಪ್ಪಾಗುತ್ತವೆ ಮತ್ತು ಮೋದಿ ಜಿ ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯಲ್ಲಿ ಎಲ್ಲ ಏಳು ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ' ಎಂದು ಭಾರ್ತಿ ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಎಪಿ ನಾಯಕ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಮತ ಎಣಿಕೆ ನಡೆಯುವವರೆಗೆ ಕಾಯುವಂತೆ ಜನರನ್ನು ಒತ್ತಾಯಿಸಿದ ಅವರು, 'ಮೋದಿಯವರ ಭಯದಿಂದಾಗಿ ಚುನಾವಣೋತ್ತರ ಸಮೀಕ್ಷೆಗಳು ಅವರಿಗೆ ಸೋಲಾಗುತ್ತದೆ ಎಂಬುದನ್ನು ಹೇಳಿಲ್ಲ. ಆದ್ದರಿಂದ ಜೂನ್ 4 ರಂದು ನೀಡಲಾಗುವ ನೈಜ ಫಲಿತಾಂಶಗಳಿಗಾಗಿ ನಾವೆಲ್ಲರೂ ಕಾಯಬೇಕಾಗಿದೆ. ಜನರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ' ಎಂದಿದ್ದಾರೆ.
Advertisement