
ಲೋಕಸಭಾ ಚುನಾವಣೆ-2024 ರ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಬುಡಮೇಲು ಮಾಡಿವೆ. ಎನ್ ಡಿಎ ಮೈತ್ರಿಕೂಟ 2019 ರಲ್ಲಿ ಪಡೆದಿದ್ದಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಪಡೆದಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಗೋಚರವಾಗಿತ್ತು.
290 ಸ್ಥಾನಗಳನ್ನು ಪಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತವಾಗಿದೆ. ಆದರೆ ಬಿಜೆಪಿಯ ಸ್ವತಂತ್ರ ಸರ್ಕಾರದ ಕನಸಿಗೆ INDIA ಮೈತ್ರಿಕೂಟ ಬ್ರೇಕ್ ಹಾಕಿದ್ದು, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿದೆ.
INDIA ಮೈತ್ರಿಕೂಟ ಬಿಜೆಪಿ ನೇತೃತ್ವದ NDA ಮೈತ್ರಿಕೂಟದ 400 ಸ್ಥಾನಗಳ ಕನಸನ್ನು ಭಗ್ನಗೊಳಿಸಿದೆ.
ಉತ್ತರ ಪ್ರದೇಶ: ಉತ್ತರ ಪ್ರದೇಶ ಈ ಬಾರಿಯ ಲೋಕಸಭಾ ಚುನಾವಣೆ-2024 ರಲ್ಲಿ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದು, ಕಾಂಗ್ರೆಸ್- ಸಮಾಜವಾದಿ ಪಕ್ಷದ ಮೈತ್ರಿ ಕೆಲಸ ಮಾಡಿದ್ದು INDIA ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 80 ಸ್ಥಾನಗಳಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ನಿರೀಕ್ಷೆ ಹುಸಿಯಾಗಿದೆ.
ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯ 48 ಲೋಕಸಭಾ ಕ್ಷೇತ್ರಗಳೊಂದಿಗೆ ಪ್ರಮುಖವಾದ ರಾಜ್ಯವಾಗಿದೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಹಾಗೂ ಎನ್ ಸಿಪಿ ( ಎಸ್ ಪಿ) ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದು, ಬಿಜೆಪಿಗೆ ಮಹಾರಾಷ್ಟ್ರದಲ್ಲೂ ಬರಸಿಡಿಲು ಬಡಿದಿದೆ. ಬಿಜೆಪಿ ಜೊತೆ ಇದ್ದ ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್ ಪವಾರ್ ಬಣದ ಎನ್ ಸಿಪಿ ಹೆಚ್ಚಿನ ಮತ ಗಳಿಸುವಲ್ಲಿ ವಿಫಲವಾಗಿವೆ.
ಪಶ್ಚಿಮ ಬಂಗಾಳ: ಆರಂಭದಿಂದಲೂ ಬಿಜೆಪಿ ವಿರೋಧಿ ಮೈತ್ರಿಕೂಟ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ತಮ್ಮ ಮೇಲುಗೈ ಸಾಧಿಸಿದ್ದಾರೆ. 42 ಸ್ಥಾನಗಳ ಪೈಕಿ ಕಳೆದ ಬಾರಿಗಿಂತಲೂ ಟಿಎಂಸಿ ಹೆಚ್ಚಿನ ಸ್ಥಾನಗಳಿಸಿದೆ. ಬಿಜೆಪಿ ಮಾತ್ರ, ಮೋದಿ, ಅಮಿತ್ ಶಾ ಹಾಗೂ ಪಕ್ಷದ ಇನ್ನಿತರ ಹಿರಿಯ ನಾಯಕರ ಅಬ್ಬರದ ಪ್ರಚಾರದ ನಡುವೆಯೂ ನಿರೀಕ್ಷಿಸಿದ ಮಟ್ಟದಲ್ಲಿ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿವೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಘಾತಕಾರಿ ಫಲಿತಾಂಶ ಎದುರಿಸಿದರೂ, ಮಧ್ಯಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ದೆಹಲಿ, ಬಿಹಾರಗಳಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಪಡೆದಿದ್ದು, ಬಿಹಾರದಲ್ಲಿ ನಿತೀಶ್ ಜೊತೆಗಿನ ಮೈತ್ರಿ ಬಿಜೆಪಿ ಕೈ ಹಿಡಿದಿದೆ. ಆದರೆ ರಾಜಸ್ಥಾನದಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ. ಈ ವರೆಗಿನ ಚುನಾವಣೆಯಲ್ಲಿ ಗುಜರಾತ್ ಸಂಪೂರ್ಣವಾಗಿ ಬಿಜೆಪಿಮಯವಾಗಿರುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಇಡೀ ರಾಜ್ಯವನ್ನು ಆವರಿಸಿಕೊಳ್ಳುವ ಬಿಜೆಪಿ ಕನಸನ್ನು ಕಾಂಗ್ರೆಸ್ ಭಗ್ನಗೊಳಿಸಿದ್ದು, ಬಿಜೆಪಿಯಿಂದ 1 ಸ್ಥಾನ ಕಸಿದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಬನಸ್ಕಾಂತ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.
ಕಟ್ಟಾ ಕಮ್ಯುನಿಷ್ಟರಿರುವ ಕೇರಳ ರಾಜ್ಯದಲ್ಲಿ ಈ ವರೆಗೂ ಪ್ರಾತಿನಿಧ್ಯವನ್ನೇ ಹೊಂದಿರದ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ತನ್ನ ಖಾತೆ ತೆರೆದಿದ್ದು, ಓರ್ವ ಸಂಸದ ಆಯ್ಕೆಯಾಗಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವುದರಲ್ಲಿ ಸಫಲವಾಗಿದೆ. ಮಣಿಪುರ ಹಿಂಸಾಚಾರ ಪ್ರಕರಣಗಳನ್ನು ನಿರ್ವಹಿಸಿದ ರೀತಿಗೆ ಬಿಜೆಪಿ ವಿರುದ್ಧ ಟೀಕೆ ವ್ಯಕ್ತವಾದರೂ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ವಿರುದ್ಧ ಅದು ಪರಿಣಾಮ ಬೀರಿಲ್ಲ.
ಅಸ್ಸಾಂನಲ್ಲಿ 14, ಮಣಿಪುರ, ತ್ರಿಪುರಾ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಎರಡು ಮತ್ತು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ತಲಾ ಒಂದು ಸೇರಿದಂತೆ 25 ಸ್ಥಾನಗಳನ್ನು ಒಳಗೊಂಡಿರುವ ಈಶಾನ್ಯವು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಒಲವು ತೋರುತ್ತಿದೆ. ಆದಾಗ್ಯೂ, 2019 ರಲ್ಲಿ ಅದರ ಕಾರ್ಯಕ್ಷಮತೆಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಒಕ್ಕೂಟದ ಜನಾದೇಶವು ಕಡಿಮೆಯಾಗುವ ನಿರೀಕ್ಷೆಯಿದೆ.
Advertisement