ನಿತೀಶ್ ಕುಮಾರ್ ಮನವೊಲಿಕೆಗೆ ಇಂಡಿಯಾ ಬಣ ನಾಯಕರ ಪ್ರಯತ್ನ: ಕಾದು ನೋಡಿ ಎಂದ ತೇಜಸ್ವಿ!
ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚನೆಗೆ ಟಿಡಿಪಿ ಹಾಗೂ ಜೆಡಿಯು ಇಂಡಿಯಾ ಮೈತ್ರಿಕೂಟ ಸೇರುತ್ತವೆಯೇ ಎಂಬ ಅನುಮಾನಗಳ ನಡುವೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಕಾದು ನೋಡಿ ಎಂದು ಜನರಿಗೆ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬುಧವಾರ "ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಿಸಿದ ವಿಮಾನದಲ್ಲಿಯೇ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸಿದ ಯಾದವ್, ವಿಪಕ್ಷಗಳ ಕೂಟಕ್ಕೆ ನಿತೀಶ್ ಅವರನ್ನು ಕರೆದೊಯ್ಯುವ ಊಹಾಪೋಹಗಳ ಕುರಿತು ಮಾತನಾಡಿದರು. ವಿಮಾನದಲ್ಲಿ ತಮ್ಮ ನಡುವೆ ಪರಸ್ಪರ ಕುಶಲೋಪರಿಗೆ ವಿಚಾರಿಸುವುದಕ್ಕೆ ಮಾತ್ರ ಸಿಮೀತವಾಗಿತ್ತು ಎಂದರು.
ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಪ್ರತಿಪಕ್ಷಗಳು ಸಂಖ್ಯಾಬಲವನ್ನು ಹುಡುಕುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಾದವ್, “ನಾವು ಇಂದು ಸಭೆಗೆ ಬಂದಿದ್ದೇವೆ. ತಾಳ್ಮೆಯಿಂದಿರಿ, ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು.
"ಈ ಚುನಾವಣೆಯಲ್ಲಿ ಜೆಡಿಯು "ಕಿಂಗ್‌ಮೇಕರ್" ಆಗಿ ಹೊರಹೊಮ್ಮಿದೆ. ಹೊಸ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದನ್ನು "ಕಿಂಗ್ ಮೇಕರ್" ಖಾತ್ರಿಪಡಿಸುತ್ತದೆ. ದೇಶಾದ್ಯಂತ ಜಾತಿ ಗಣತಿ ನಡೆಸುತ್ತದೆ. ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ನಲ್ಲಿ ಬಿಹಾರ ನೀಡಿದ ಶೇ. 75 ರಷ್ಟು ಮೀಸಲಾತಿಗೆ ನ್ಯಾಯಾಂಗ ಪರಿಶೀಲನೆಯಿಂದ ವಿನಾಯಿತಿ ನೀಡುತ್ತದೆ. ''ಬಿಹಾರ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ. ಯಾವುದೇ ಸರ್ಕಾರ ಬಂದರೂ ಕಿಂಗ್ ಮೇಕರ್ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳಬೇಕು, ನಾವು ನೀಡಿದ ಶೇ 75ರಷ್ಟು ಮೀಸಲಾತಿಯನ್ನು ಶೆಡ್ಯೂಲ್ 9ರ ಅಡಿಯಲ್ಲಿ ತರಬೇಕು ಮತ್ತು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದರು.
ಫೈಜಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಗೆಲುವನ್ನು ಶ್ಲಾಘಿಸಿದ ಅವರು," ನಾವು ಅಯೋಧ್ಯೆಯನ್ನು ಗೆದ್ದಿದ್ದೇವೆ. ಪ್ರಧಾನಿ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣವನ್ನು ಬಳಸಿದರು. ರಾಮ್ ಜಿ ಅವರಿಗೂ ತಕ್ಕ ಪಾಠ ಕಲಿಸಿದ್ದಾರೆ,’’
ಸಂವಿಧಾನ ಉಳಿಸಲು ಮತ್ತು ನಿರಂಕುಶ ಪ್ರಭುತ್ವಕ್ಕೆ ತಕ್ಕ ಪಾಠ ಕಲಿಸಲು ದೇಶದ ಜನರು ಮತ ಹಾಕಿರುವುದು ನಮಗೆ ಸಂತಸ ತಂದಿದೆ. ಈ ದೇಶದ ಜನತೆ ದ್ವೇಷದ ರಾಜಕಾರಣವನ್ನು ಇಷ್ಟಪಡುವುದಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಅವರು ತಮ್ಮ ಕೆಲಸಗಳಿಗೆ ಆದ್ಯತೆ ನೀಡಲಿಲ್ಲ. ಹೀಗಾಗಿ ಜನರು ತಕ್ಕ ಪಾಠ ಕಲಿಸಿದರು ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಬುಧವಾರ ಸಂಜೆ ಇಂಡಿಯಾ ಬಣ ನಾಯಕರು ಸಭೆ ಸೇರಿ ಸರ್ಕಾರ ರಚನೆಯ ಕಾರ್ಯತಂತ್ರವನ್ನು ನಿರ್ಧರಿಸಲಿದ್ದಾರೆ. ಶರದ್ ಪವಾರ್, ಎಂಕೆ ಸ್ಟಾಲಿನ್, ಚಂಪೈ ಸೊರೆನ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಅಭಿಷೇಕ್ ಬ್ಯಾನರ್ಜಿ, ಸೀತಾರಾಂ ಯೆಚೂರಿ ಮತ್ತು ಡಿ ರಾಜಾ ಸೇರಿದಂತೆ ಪ್ರತಿಪಕ್ಷ ನಾಯಕರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ