
ನವದೆಹಲಿ: ಲೋಕಸಭೆ ಚುನಾವಣೆಯ ಜನಾದೇಶವು ಪ್ರಧಾನಿ ನರೇಂದ್ರ ಮೋದಿಯವರಿಗೆ 'ನೈತಿಕ, ರಾಜಕೀಯ ಮತ್ತು ವೈಯಕ್ತಿಕ' ಸೋಲಾಗಿದ್ದು, ಅವರ 'ಚಿಂತಾಜನಕ' ಚುನಾವಣಾ ಸಾಧನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳನ್ನು ಈಗ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 543 ಸದಸ್ಯ ಬಲದ ಸದನದಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಆದರೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಒಟ್ಟು 293 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ.
ಚುನಾವಣಾ ಫಲಿತಾಂಶವು ನರೇಂದ್ರ ಮೋದಿಯವರಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕವಾಗಿ ಗಮನಾರ್ಹ ಸೋಲಿನ ಹೊರತಾಗಿಯೂ, ಈ ಫಲಿತಾಂಶವನ್ನಿಟ್ಟುಕೊಂಡು ಸಕಾರಾತ್ಮಕ ಅಂಶಗಳನ್ನು ಹುಡುಕುವ ಡೊಳ್ಳು ಕುಣಿತ ಆರಂಭವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಜವಾಹರಲಾಲ್ ನೆಹರು ನಂತರ ಸತತವಾಗಿ ಮೂರನೇ ಬಾರಿ ಜನಾದೇಶ ಪಡೆದವರು ನರೇಂದ್ರ ಮೋದಿಯವರು ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಪಕ್ಷ 240 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿರುವುದು ಮತ್ತು 'ಮೂರನೇ ಒಂದು ಭಾಗ'ದಷ್ಟು ಜನಾದೇಶ ಪಡೆದಿರುವುದು ಹೇಗೆ ನೆಹರು ಅವರಿಗೆ ಸಮನಾಗುತ್ತದೆ ಎಂಬುದನ್ನು ಅವರು ವಿವರಿಸಬೇಕು ಎಂದಿದ್ದಾರೆ.
'ನೆಹರೂ ಅವರು 1952 ರಲ್ಲಿ 364 ಸ್ಥಾನಗಳನ್ನು ಪಡೆದಿದ್ದರು. 1957 ರಲ್ಲಿ 371 ಸ್ಥಾನಗಳನ್ನು ಮತ್ತು 1962 ರಲ್ಲಿ 361 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರತಿ ಬಾರಿಯೂ 3ನೇ 2ರಷ್ಟು ಬಹುಮತ ಪಡೆದಿದ್ದಾರೆ. ಆದರೂ ಅವರು ಸಂಪೂರ್ಣ ಪ್ರಜಾಪ್ರಭುತ್ವವಾದಿಯಾಗಿ ಉಳಿದಿದ್ದರು. ತಮ್ಮ ನಿರಂತರ ಉಪಸ್ಥಿತಿಯಿಂದ ಸಂಸತ್ತನ್ನು ಬಹಳ ಎಚ್ಚರಿಕೆಯಿಂದ ಪೋಷಿಸಿದರು' ಎಂದು ತಿಳಿಸಿದ್ದಾರೆ.
ಸತತವಾಗಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೋದಿ ವಿಶಿಷ್ಟವಲ್ಲ, ನೆಹರೂ ನಂತರ ಇದನ್ನು ಸಾಧಿಸಿದ ಏಕೈಕ ವ್ಯಕ್ತಿಯೂ ಅವರಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು 1996, 1998 ಮತ್ತು 1999 ರಲ್ಲಿ ಮೂರು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದಿರಾ ಗಾಂಧಿ ಅವರು 1966, 1967, 1971 ಮತ್ತು 1980 ರಲ್ಲಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಅವರು ಹೇಳಿದರು.
2024 ರಲ್ಲಿ ನರೇಂದ್ರ ಮೋದಿಯವರ ಕರುಣಾಜನಕ ಚುನಾವಣಾ ಸಾಧನೆಯನ್ನು ಸಮರ್ಥಿಸಿಕೊಳ್ಳಲು ಅವರ ಹಿಂಬಾಲಕರು ಇದೀಗ ಏನನ್ನಾದರೂ ಹುಡುಕುತ್ತಿದ್ದಾರೆ ಎಂದು ರಮೇಶ್ ಹೇಳಿದರು.
Advertisement