
ನವದೆಹಲಿ: ಏಕತಾನತೆಯ (ಗೀಳಿನ) ಕೆಲಸದ ಸಂಸ್ಕೃತಿಯನ್ನು ಸಾಮಾನ್ಯೀಕರಿಸಬೇಕು ಎಂದಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಹೆಚ್ಚು ಮೌಲ್ಯಯುತ ಮತ್ತು ಸಾಮಾನ್ಯವೆಂದು ಪರಿಗಣಿಸುವ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.
ಭಾರತವು ಇನ್ನೂ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನ ಸಾಧಿಸಲು ಶ್ರಮಿಸುತ್ತಿರುವುದರಿಂದ ಭಾರತೀಯರು ಸಂತೃಪ್ತರಾಗಬಾರದು ಅಥವಾ ಸೋಮಾರಿಗಳಾಗಿರಬಾರದು ಎಂದಿದ್ದಾರೆ.
ರಣಾವತ್ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ತಮ್ಮ ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಪ್ರಧಾನ ಮಂತ್ರಿ ಕಚೇರಿಯ (PMO) ಸಿಬ್ಬಂದಿಯನ್ನು ಉದ್ದೇಶಿಸಿ ಮಾಡಿದ ಭಾಷಣದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ, 'ನನ್ನ ಪ್ರತಿ ಕ್ಷಣವೂ ದೇಶಕ್ಕಾಗಿ' ಎಂದು ಹೇಳಿರುವ ಮೋದಿ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಕೆಲಸದಲ್ಲಿ ವಾರಾಂತ್ಯ ಎನ್ನುವ ಪರಿಕಲ್ಪನೆಯು 'ಪಾಶ್ಚಿಮಾತ್ಯರ ಬ್ರೈನ್‌ವಾಶಿಂಗ್' ಆಗಿದೆ ಹೊರತು ಬೇರೇನೂ ಅಲ್ಲ ಎಂದು ರಣಾವತ್ ಬರೆದಿದ್ದಾರೆ.
'ನಾವು ಈ ಗೀಳಿನ ಕೆಲಸದ ಸಂಸ್ಕೃತಿಯನ್ನು ಸಾಮಾನ್ಯಗೊಳಿಸಬೇಕು ಮತ್ತು ವಾರಾಂತ್ಯಕ್ಕಾಗಿ ಎದುರು ನೋಡುವುದನ್ನು ನಿಲ್ಲಿಸಬೇಕು. ಸೋಮವಾರವನ್ನು ಇಷ್ಟಪಡದಿರುವ ಬಗ್ಗೆ ಮೀಮ್‌ಗಳು ಮತ್ತು ಜೋಕ್‌ಗಳಿಂದ ದೂರವಿರಬೇಕು. ಇವು ಕೆಲಸದ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಇದೆಲ್ಲವೂ ಪಾಶ್ಚಾತ್ಯರ ಬ್ರೈನ್ ವಾಶಿಂಗ್ ಅಷ್ಟೆ; ನಾವು ಇನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಲ್ಲ. ಹೀಗಾಗಿ, ಕೆಲಸದ ಬಗ್ಗೆ ಬೇಸರ ಮತ್ತು ಸೋಮಾರಿಯಾಗಿರಲು ನಮಗೆ ಸಾಧ್ಯವಿಲ್ಲ' ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಬಾಲಿವುಡ್‌ನ ಜನಪ್ರಿಯ ನಟಿ ಮತ್ತು ದೀರ್ಘಕಾಲದಿಂದ ಮೋದಿ ಬೆಂಬಲಿಗರಾಗಿರುವ ಕಂಗನಾ ರಣಾವತ್ ಅವರು ಮೊದಲ ಪ್ರಯತ್ನದಲ್ಲಿಯೇ ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಅವರು ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರನ್ನು ಸೋಲಿಸಿದರು.
Advertisement