
ನವದೆಹಲಿ: ದಕ್ಷಿಣ ಕುವೈತ್‌ನ ವಿದೇಶಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 40ಕ್ಕೂ ಹೆಚ್ಚು ಭಾರತೀಯರ ಮೃತದೇಹಗಳನ್ನು ಮರಳಿ ದೇಶಕ್ಕೆ ತರಲು ಭಾರತ ಗುರುವಾರ ರಾತ್ರಿ ಕುವೈತ್‌ಗೆ ಮಿಲಿಟರಿ ಸಾರಿಗೆ ವಿಮಾನವನ್ನು ಕಳುಹಿಸುತ್ತಿದೆ.
ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರು ಮತ್ತು ಮೂವರು ಫಿಲಿಪಿನೋ ಪ್ರಜೆಗಳ ಶವಗಳನ್ನು ಗುರುತಿಸಿರುವುದಾಗಿ ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದಲ್ಲಿ ಕನಿಷ್ಠ 49 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.
ಭಾರತೀಯ ವಾಯುಪಡೆಯ C-130J ಸಾರಿಗೆ ವಿಮಾನ ಇಂದು ರಾತ್ರಿ ಕುವೈತ್ ಗೆ ತೆರಳುತ್ತಿದ್ದು, ಶುಕ್ರವಾರ ಮೃತದೇಹಗಳನ್ನು ಮರಳಿ ದೇಶಕ್ಕೆ ತರಲಿದೆ. ಮೃತ ಭಾರತೀಯರಲ್ಲಿ ಹೆಚ್ಚಿನವರು ಕೇರಳದವರಾಗಿರುವುದರಿಂದ ವಿಮಾನ ಮೊದಲು ಕೊಚ್ಚಿಯಲ್ಲಿ ಲ್ಯಾಂಡ್ ಆಗಲಿದೆ ಎಂದು ದೆಹಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಕೆಲವರು ಉತ್ತರ ಭಾರತದವರಿದ್ದು, ವಿಮಾನವು ಕೊಚ್ಚಿಯಿಂದ ದೆಹಲಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
"ಎಲೆಕ್ಟ್ರಿಕಲ್ ಸರ್ಕ್ಯೂಟ್" ನಿಂದ ಈ ಭೀಕರ ಅಗ್ನಿ ಅವಘಡ ಸಂಭವಿಸಿದೆ ಎಂದು ಕುವೈತ್ ಅಗ್ನಿಶಾಮಕ ದಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement