
ಕೊಯಮತ್ತೂರು: ಬೆಂಗಳೂರಿನಲ್ಲಿ ಕಂಪ್ಯೂಟರ್ ಖರೀದಿಸಿ ಕಾರಿನಲ್ಲಿ ತೆರಳುತ್ತಿದ್ದವರ ಮೇಲೆ ತಮಿಳುನಾಡಿನಲ್ಲಿ ದರೋಡೆಗೆ ಯತ್ನಿಸಿದ ಆರೋಪದ ಮೇರೆಗೆ 4 ಮಂದಿ ಆರೋಪಿಗಳನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಧ್ಯರಾತ್ರಿ ಕಾರಿನಲ್ಲಿ ತೆರಳುತ್ತಿದ್ದವರ ಮೇಲೆ ಹೆದ್ದಾರಿಯಲ್ಲಿ ಕಾರಿನಲ್ಲಿ ಅಡ್ಡಗಟ್ಟಿದ ದರೋಡೆಕೋರರ ತಂಡ ಕ್ಷಣಮಾತ್ರದಲ್ಲಿ ಕಾರಿನಿಂದ ಇಳಿದು ಮಾರಕಾಸ್ತ್ರಗಳಿಂದ ಕಾರಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದರೋಡೆಕೋರರ ತಂಡ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು ಅನಾಹುತ ಅರಿತ ಕಾರುಚಾಲಕ ಕೂಡಲೇ ಹಿಂದಕ್ಕೆ ಚಲಿಸಿ ಕೂಡಲೇ ಅಲ್ಲಿಂದ ವೇಗವಾಗಿ ಅವರ ಕಾರಿನ ಡೋರ್ ಗಳನ್ನು ಗುದ್ದಿಕೊಂಡು ಪರಾರಿಯಾಗುತ್ತಾರೆ.
ಇವಿಷ್ಟೂ ಘಟನೆ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದ್ದು, ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೇರಳ ಮೂಲದ ಮುಸುಕುಧಾರಿಗಳ ಬಂಧನ
ಬಳಿಕ ಸಂತ್ರಸ್ತರು ಮಧುಕರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಡಿಯೋ ಮತ್ತು ದೂರಿನ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಕೊಯಮತ್ತೂರು ಪೊಲೀಸರು ಕೇರಳದ ನಾಲ್ವರು ಮುಸುಕುಧಾರಿ ದರೋಡೆಕೋರರನ್ನು ಬಂಧಿಸಿದ್ದಾರೆ.
ಕಾರು ಕದಿಯಲು ಯತ್ನಿಸಿದ ಕೇರಳ ಮೂಲದ ಶಿವದಾಸ್, ರಮೇಶ್ ಬಾಬು, ವಿಷ್ಣು, ಅಜಯ್ ಕುಮಾರ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಹವಾಲಾ ಹಣ ಎಂದು ಭಾವಿಸಿ ಕಾರನ್ನು ದರೋಡೆ ಮಾಡಲು ಯತ್ನಿಸಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಕಂಪ್ಯೂಟರ್ ಖರೀಸಿದ್ದ ತಂಡ
ಸಂತ್ರಸ್ಥರನ್ನು ಕೇರಳದ ಕೊಚ್ಚಿ ಮೂಲದ ಅಸ್ಲಾಂ ಸಿದ್ದಿಕಿ ಎಂದು ತಿಳಿದುಬಂದಿದ್ದು, ಅವರು ಜಾಹೀರಾತು ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಜೂನ್ 13ರಂದು ಅಸ್ಲಂ ಸಿದ್ದಿಕ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕಂಪ್ಯೂಟರ್ ಮತ್ತು ಬಿಡಿಭಾಗಗಳನ್ನು ಖರೀದಿಸಿದ್ದರು. ಬಳಿಕ ಕೊಯಮತ್ತೂರು ಮೂಲಕ ಕಾರಿನಲ್ಲಿ ಕೊಚ್ಚಿಗೆ ಹಿಂತಿರುಗುತ್ತಿದ್ದರು.
ಈ ವೇಳೆ ಕೊಯಮತ್ತೂರು-ಪಾಲಕ್ಕಾಡ್ ಬೈಪಾಸ್‌ನ ಮಧುಕರೈ ಪ್ರದೇಶಕ್ಕೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬರುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದ ಮುಸುಕುಧಾರಿಗಳು ಅಸ್ಲಂ ಸಿದ್ದಿಕಿ ಸೇರಿದಂತೆ ಕಾರನ್ನು ಅಡ್ಡಗಟ್ಟಿ ದರೋಡೆಗೆ ಮುಂದಾಗಿದ್ದರು.
Advertisement