
ನೋಯ್ಡಾ: ದೀಪಾ ದೇವಿ ಎಂಬುವವರು ತಮ್ಮ ಐದು ವರ್ಷದ ಮಗನಿಗೆ ಮ್ಯಾಂಗೋ ಶೇಕ್ ಮಾಡಿಕೊಡಲೆಂದು ಬ್ಲಿಂಕಿಟ್‌ನಿಂದ ಅಮುಲ್ ವೆನಿಲ್ಲಾ ಮ್ಯಾಜಿಕ್ ಐಸ್ ಕ್ರೀಂ ಟಬ್ ಅನ್ನು ಆರ್ಡರ್ ಮಾಡಿದ್ದರು. ಟಬ್ ಅನ್ನು ತೆರೆದಾಗ ಅವರಿಗೆ ಆಘಾತ ಕಾದಿತ್ತು. ಐಸ್‌ಕ್ರೀಂ ಟಬ್‌ನೊಳಗೆ ಜರಿ ಹುಳುವನ್ನು ಕಂಡು ದಂಗಾಗಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 12 ರಲ್ಲಿ ಈ ಘಟನೆ ನಡೆದಿದೆ. ಐಸ್ ಕ್ರೀಂನ ಟಬ್ ಮುಚ್ಚಳ ಎತ್ತಿದ ಕೂಡಲೇ ಅವರಿಗೆ ಜರಿ ಕಂಡುಬಂದಿದೆ. ಈ ಸಂಬಂಧ ದೀಪಾ ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಆಹಾರ ಪದಾರ್ಥಗಳ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜರಿಯನ್ನು ಕಂಡ ತಕ್ಷಣವೇ ದೀಪಾ ಬ್ಲಿಂಕಿಟ್‌ಗೆ ದೂರು ಸಲ್ಲಿಸಿದ್ದಾರೆ. ಆಗ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಐಸ್ ಕ್ರೀಮ್ ಖರೀದಿಗೆ ನೀಡಿದ್ದ 195 ರೂ.ಗಳನ್ನು ಮರುಪಾವತಿಸಿದೆ. ಹೆಚ್ಚಿನ ತನಿಖೆಗಾಗಿ ಈ ವಿಷಯವನ್ನು ಅಮುಲ್‌ಗೆ ತಿಳಿಸಿರುವುದಾಗಿ ಬ್ಲಿಂಕಿಟ್ ಆಕೆಗೆ ಭರವಸೆ ನೀಡಿದೆ.
ಕೋನ್ ಐಸ್ ಕ್ರೀಂನಲ್ಲಿ ಕೈಬೆರಳು
ಎರಡು ದಿನಗಳ ಹಿಂದಷ್ಟೇ, ಮುಂಬೈನ ಡಾ. ಓರ್ಲೆಮ್ ಬ್ರಾಂಡನ್ ಸೆರಾವೊ ಎಂಬುವವರು ಆರ್ಡರ್ ಮಾಡಿದ್ದ ಐಸ್ ಕ್ರೀಮ್ ಕೋನ್‌ನಲ್ಲಿ ಮಾನವನ ಬೆರಳು ಕಂಡುಬಂದಿತ್ತು.
'ನಾನು ಆಪ್‌ನಿಂದ ಮೂರು ಕೋನ್ ಐಸ್ ಕ್ರೀಮ್‌ಗಳನ್ನು ಆರ್ಡರ್ ಮಾಡಿದ್ದೆ. ಅವುಗಳಲ್ಲಿ ಒಂದು ಯುಮ್ಮೋ ಬ್ರಾಂಡ್‌ನ ಬಟರ್‌ಸ್ಕಾಚ್ ಐಸ್‌ಕ್ರೀಮ್ ಆಗಿತ್ತು. ಅರ್ಧದಷ್ಟು ತಿಂದ ನಂತರ ಬಾಯಿಯಲ್ಲಿ ಗಟ್ಟಿಯಾದ ವಸ್ತುವೊಂದು ಸಿಕ್ಕಿ್ದ ಅನುಭವವಾಯಿತು. ಅದು ನಟ್ ಅಥವಾ ಚಾಕೊಲೇಟ್ ಪೀಸ್ ಎಂದು ನಾನು ಭಾವಿಸಿದೆ. ಅದು ಏನೆಂದು ಪರೀಕ್ಷಿಸಲು ಉಗುಳಿದೆ' ಎಂದು ಡಾ. ಸೆರಾವೊ ಹೇಳಿದ್ದಾರೆ.
'ನಾನು ವೈದ್ಯನಾಗಿರುವುದರಿಂದ ಮಾನವನ ದೇಹದ ಭಾಗಗಳು ಹೇಗೆ ಇರುತ್ತವೆ ಎಂದು ನನಗೆ ತಿಳಿದಿದೆ. ನಾನು ಅದನ್ನು ಎಚ್ಚರಿಕೆಯಿಂದ ಪರೀಕ್ಷಿಸಿದಾಗ, ಅದು ಮಾನವನ ಬೆರಳು ಎಂದು ತಿಳಿಯಿತು. ಅದು ಹೆಬ್ಬೆರಳನ್ನು ಹೋಲುತ್ತಿತ್ತು. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ' ಎಂದಿದ್ದಾರೆ.
ಐಸ್ ಕ್ರೀಂನಲ್ಲಿ ಜರಿ ಪತ್ತೆಯಾಗಿರುವ ಕುರಿತು ಮಾಹಿತಿ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸೆಕ್ಟರ್-12ನ್ನು ತಲುಪಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಅವರು ಆಪ್ ಸ್ಟೋರ್‌ಗೆ ತೆರಳಿ ಆ ಬ್ಯಾಚ್‌ನ ಐಸ್ ಕ್ರೀಂ ಮಾರಾಟವನ್ನು ನಿಲ್ಲಿಸಿದ್ದಾರೆ.
ಸದ್ಯ ಐಸ್ ಕ್ರೀಮ್ ಕಂಪನಿ ವಿರುದ್ಧ ಆಹಾರ ಕಲಬೆರಕೆ ಮತ್ತು ಮಾನವನ ಜೀವಕ್ಕೆ ಅಪಾಯ ತಂದಿರುವ ಪ್ರಕರಣ ದಾಖಲಾಗಿದೆ.
Advertisement