

ನವದೆಹಲಿ: ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೋನ್ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಬಳಿಕ ಅಮುಲ್ ಐಸ್‌ಕ್ರೀಂನಲ್ಲಿ ಜರಿ ಕಂಡುಬಂದಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ದಂಪತಿಗೆ ಅಮೆಜಾನ್ ಪ್ಯಾಕೇಜ್‌ನಲ್ಲಿ ಜೀವಂತ ನಾಗರಹಾವು ಪತ್ತೆಯಾಗಿದ್ದು ಸೇರಿದಂತೆ ಇದೀಗ ಈ ಸಾಲಿಗೆ ಇಲಿ ಸೇರಿಕೊಂಡಿದೆ. ಅಹಮದಾಬಾದ್‌ನ ಜನಪ್ರಿಯ ರೆಸ್ಟೋರೆಂಟ್ ಒಂದರ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಉಂಟಾಗಿದೆ.
ನಿಕೋಲ್‌ನಲ್ಲಿರುವ ದೇವಿ ದೋಸೆ ರೆಸ್ಟೊರೆಂಟ್‌ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಹಮದಾಬಾದ್‌ನ ದೇವಿ ದೋಸೆ ಫುಡ್ ಜಾಯಿಂಟ್‌ನಲ್ಲಿ ಗ್ರಾಹಕರಿಗೆ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಈ ಸಂಬಂಧ ಗ್ರಾಹಕರು ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ)ಗೆ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯು ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಎಎನ್‌ಐ ಜೊತೆ ಮಾತನಾಡಿದ ಎಎಮ್‌ಸಿಯ ಆಹಾರ ಸುರಕ್ಷತಾ ಅಧಿಕಾರಿ ಭವಿನ್ ಜೋಶಿ, ಅಹಮದಾಬಾದ್ ಕಾರ್ಪೊರೇಷನ್‌ನ ಎಲ್ಲ ವ್ಯಾಪಾರಸ್ಥರು ಗ್ರಾಹಕರಿಗೆ ತಾವು ನೀಡುವ ಆಹಾರ ಪದಾರ್ಥಗಳ ವಿಚಾರದಲ್ಲಿ ಬಹಳ ಜಾಗರೂಕರಾಗಿರಲು ಮನವಿ ಮಾಡುತ್ತೇನೆ. ಇದರಿಂದ ಇಂತಹ ಘಟನೆಗಳನ್ನು ತಪ್ಪಿಸಬಹುದು ಎಂದಿದ್ದಾರೆ.
ಸತ್ತ ಇಲಿ ಸಾಂಬಾರ್‌ನಲ್ಲಿ ಪತ್ತೆಯಾಗಿರುವುದನ್ನು ಗ್ರಾಹಕರು ತೋರಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವೀಕ್ಷಣೆಗಳನ್ನು ಕಂಡಿದೆ.
'ದಯವಿಟ್ಟು ಆಹಾರ ಮತ್ತು ಔಷಧ ಇಲಾಖೆಯು ಮೇಜಿನ ಕೆಳಗೆ ಹಣವನ್ನು ತೆಗೆದುಕೊಳ್ಳಬೇಡಿ ಮತ್ತು ಅಂತಹ ಹೋಟೆಲ್‌ಗಳಿಗೆ ಅನುಮೋದನೆ ನೀಡಬೇಡಿ' ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.
Advertisement