NEET-UG Row: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್ತಿನಲ್ಲಿ “ನೀಟ್ ಘೋಷಣೆ”
ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸುತ್ತಲಿನ ಅಕ್ರಮಗಳ ವಿವಾದವು ಇಂದು ನಡೆದ ಸಂಸತ್ ಅಧಿವೇಶನದ ವೇಳೆಯಲ್ಲೂ ಪ್ರತಿಧ್ವನಿಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್ತಿನಲ್ಲಿ ವಿಪಕ್ಷಗಳು “ನೀಟ್ ಘೋಷಣೆ” ಕೂಗಿವೆ.
ವಿರೋಧ ಪಕ್ಷದ ಸಂಸದರು ಪ್ರಧಾನ್ ವಿರುದ್ಧ ನೀಟ್ ವಿರೋಧಿ ಘೋಷಣೆಗಳನ್ನು ಕೂಗಿದ್ದು ಈ ವೇಳೆ ಆಡಳಿತರೂಢ ಎನ್ ಡಿಎ ನಾಯಕರು ಕೊಂಚ ಮುಜುಗರಕ್ಕೀಡಾದರು. ಪ್ರತಿಪಕ್ಷಗಳ ನಾಯಕರು ತಾವು ಕುಳಿತಿದ್ದ ಸ್ಥಳದಿಂದಲೇ ನೀಟ್ ಮತ್ತು ಅವಮಾನ (“NEET” and “shame”) ಎಂಬ ಘೋಷಣೆಗಳನ್ನು ಕೂಗಿದರು.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, 'ಬಿಜೆಪಿ ತನ್ನ ಬೆಂಬಲಿಗರಿಗಾಗಿ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡುತ್ತದೆ ಎಂದು ಆರೋಪಿಸಿದರು. ''ಕೇಂದ್ರ ಸರ್ಕಾರಕ್ಕೆ ಇದೇನೂ ಹೊಸದಲ್ಲ. ಇದು ಬಿಜೆಪಿಯ ಹಳೆಯ ತಂತ್ರ. ನೀವು ಇತಿಹಾಸವನ್ನು ನೋಡಿದರೆ, ಬಿಜೆಪಿ ತನ್ನ ಜನರನ್ನು ಮೆಚ್ಚಿಸಲು ಪರೀಕ್ಷಾ ಪತ್ರಿಕೆಗಳನ್ನು ಸೋರಿಕೆ ಮಾಡುತ್ತದೆ. ಇದು ಉತ್ತರ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಇದೀಗ ದೆಹಲಿ ತಲುಪಿದೆ. ಕೋಟಿಗಟ್ಟಲೆ ಜನರಿಗೆ ಮೋಸ ಮಾಡಿದ್ದಾರೆ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ಅಭಿಪ್ರಾಯವನ್ನು ಪ್ರತಿಧ್ವನಿಸುತ್ತಾ, ಡಿಎಂಕೆ ಸಂಸದೆ ಕನಿಮೊಳಿ ಅವರು ತಮಿಳುನಾಡಿಗೆ ನೀಟ್‌ನಿಂದ ವಿನಾಯಿತಿ ನೀಡಬೇಕೆಂಬ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು. “ತಮಿಳುನಾಡು ಯಾವಾಗಲೂ ನಮಗೆ NEET ಬೇಡವೆಂದು ಹೇಳುತ್ತಿದೆ ಮತ್ತು ಅದರಿಂದ ವಿನಾಯಿತಿ ಪಡೆಯಲು ಬಯಸಿದೆ. ಈ ಪರೀಕ್ಷೆಯು ನಿಜವಾಗಿಯೂ ನ್ಯಾಯಯುತವಾಗಿಲ್ಲ ಎಂಬುದು ಇಂದು ಬಹಳ ಸ್ಪಷ್ಟವಾಗಿದೆ. ನಮಗೆ ಇದು ಬೇಡ ಎಂದು ತಮಿಳುನಾಡು ಯಾವಾಗಲೂ ಹೇಳುತ್ತಿದೆ ಮತ್ತು ಈಗ ಇಡೀ ದೇಶ ಇದನ್ನು ಹೇಳುತ್ತಿದೆ ಎಂದರು.
ಇನ್ನು ಈ ಹಿಂದೆ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಜೂನ್ 4 ರಂದು ಪ್ರಕಟವಾದ ನೀಟ್ ಯುಜಿ ಪರೀಕ್ಷೆಯ ಫಲಿತಾಂಶಗಳಲ್ಲಿ ಆಘಾತಕಾರಿ ಅಕ್ರಮಗಳು ನಡೆದಿವೆ. ಗ್ರೇಸ್ ಮಾರ್ಕ್ಸ್ ನೀಡಿಕೆ ವೇಳೆ ಅಕ್ರಮ ನಡೆದಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಲ್ಲದೆ ಲಕ್ಷಾಂತರ ನೀಟ್ ಆಕಾಂಕ್ಷಿಗಳು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ಸಾರ್ವಜನಿಕ ಪ್ರತಿಭಟನೆಯ ನಡುವೆ, ಹಲವಾರು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ.
ಇನ್ನು ವಿಪಕ್ಷಗಳ ನಾಯಕರ ಘೋಷಣೆ ಹೊರತಾಗಿಯೂ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “18 ನೇ ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ನನಗೆ ಗೌರವವಿದೆ. ಜನರ ಆಶೋತ್ತರಗಳನ್ನು ಸಾಕಾರಗೊಳಿಸಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜಕ್ಕೆ ಸೇವೆ ಸಲ್ಲಿಸಲು ಯಾವಾಗಲೂ ಶ್ರಮಿಸುತ್ತೇನೆ” ಎಂದು ಹೇಳಿದರು.
ಹೊಸ ಲೋಕಸಭಾ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಹೊಸ ಸಂಸತ್ ಕಟ್ಟಡದಿಂದ ಕೂಗಳತೆ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ನೀಟ್ ಕುರಿತು ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾಕಾರರು ಸಂಸತ್ತಿಗೆ ಮೆರವಣಿಗೆ ನಡೆಸಲು ಯೋಜಿಸಿದ್ದರು; ಆದರೆ ಮೆರವಣಿಗೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ