
ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರಿನ `ಕೊರತೆ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಲ ಸಚಿವೆ ಅತಿಶಿ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ಎಎಪಿ ಸೋಮವಾರ ಹೇಳಿದೆ. ಅವರ ತೂಕ 65.8 ಕೆಜಿಯಿಂದ 63.6 ಕೆಜಿಗೆ ಇಳಿದಿದೆ. 4 ದಿನಗಳಲ್ಲಿ 2.2 ಕೆಜಿಯಷ್ಟು ತೂಕ ಕಡಿಮೆಯಾಗಿದೆ ಎಂದು ಪಕ್ಷ ಹೇಳಿದೆ.
ಉಪವಾಸ ಸತ್ಯಾಗ್ರಹದ ಮೊದಲ ದಿನಕ್ಕೆ ಹೋಲಿಸಿದರೆ ಅತಿಶಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು 4ನೇ ದಿನ 28 ಯೂನಿಟ್‌ಗಳಷ್ಟು ಕಡಿಮೆಯಾಗಿದೆ. ಇದರೊಂದಿಗೆ ಆಕೆಯ ರಕ್ತದೊತ್ತಡದ ಮಟ್ಟವೂ ಕಡಿಮೆಯಾಗಿದೆ. ಅತಿಶಿಯ ರಕ್ತದಲ್ಲಿನ ಸಕ್ಕರೆಯ ಮಟ್ಟ, ರಕ್ತದೊತ್ತಡ ಮತ್ತು ತೂಕ ಕಡಿಮೆಯಾಗುತ್ತಿರುವ ವೇಗವನ್ನು ವೈದ್ಯರು ಅಪಾಯಕಾರಿ ಎಂದು ವಿವರಿಸಿದ್ದಾರೆ. ಅವರ ಕೀಟೋನ್ ಮಟ್ಟವು ತುಂಬಾ ಹೆಚ್ಚಾಗಿದೆ. ಇದು ದೇಹವನ್ನು ಹಾನಿಗೊಳಿಸುತ್ತದೆ ಎಎಪಿ ಹೇಳಿದೆ.
ಈ ಮಧ್ಯೆ ಉಪವಾಸ ಮುಂದುವರಿಸುವುದಾಗಿ ಅತಿಶಿ ಸ್ಪಷ್ಟಪಡಿಸಿದ್ದಾರೆ. ನನ್ನ ಆರೋಗ್ಯವು ಎಷ್ಟೇ ಹದಗೆಟ್ಟರೂ, ದೆಹಲಿಯವರಿಗೆ ನ್ಯಾಯಯುತವಾದ ನೀರು ಸಿಗುವಂತೆ ಖಾತ್ರಿಪಡಿಸುತ್ತೇನೆ. ಹರಿಯಾಣ ಸರ್ಕಾರ 28 ಲಕ್ಷ ದೆಹಲಿಯವರಿಗೆ ನೀರು ಒದಗಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ನೀರಿನ ಬಿಕ್ಕಟ್ಟನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಒತ್ತಾಯಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ದಿನದಂದು ಸಚಿವರ ಆರೋಗ್ಯದ ಬಗ್ಗೆ ಎಎಪಿ ಕಳವಳ ವ್ಯಕ್ತಪಡಿಸಿದೆ.
ಅತಿಶಿ ಅವರ ತೂಕ ಮತ್ತು ರಕ್ತದೊತ್ತಡ ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಎಎಪಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಅತಿಶಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದು, ಹರಿಯಾಣ ನೀರು ಬಿಡುವವರೆಗೂ ಉಪವಾಸ ಮುಂದುವರಿಸುವುದಾಗಿ ಹೇಳಿದ್ದಾರೆ. ದೆಹಲಿಯ ನೀರಿನ ಅವಶ್ಯಕತೆ ದಿನಕ್ಕೆ 1,005 ಮಿಲಿಯನ್ ಗ್ಯಾಲನ್‌ಗಳು (MGD) ಆದರೆ ಹರಿಯಾಣದಿಂದ ಸುಮಾರು 613 MGD ನೀರು ಬರುತ್ತಿದೆ.
Advertisement