
ಚೆನ್ನೈ: ಆಪಲ್ ಐಫೋನ್‌ಗಳನ್ನು ತಯಾರಿಸುವ ಫಾಕ್ಸ್‌ಕಾನ್ ಇಂಡಿಯಾದ ಕಾರ್ಖಾನೆಯಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಮಾಧ್ಯಮ ವರದಿಗಳ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆಯಿಂದ ವಿಸ್ತೃತ ವರದಿ ಕೇಳಿದೆ.
1976ರ ಸಮಾನ ಸಂಭಾವನೆ ಕಾಯಿದೆಯ ಸೆಕ್ಷನ್ 5ರ ಪ್ರಕಾರ ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಾಗ ಯಾವುದೇ ತಾರತಮ್ಯ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಕಾರ್ಮಿಕ ಸಚಿವಾಲಯ ಬುಧವಾರ ತಿಳಿಸಿದೆ.
ಈ ಕಾಯಿದೆಯ ನಿಬಂಧನೆಗಳ ಜಾರಿ ಮತ್ತು ಆಡಳಿತಕ್ಕೆ ತಮಿಳುನಾಡು ಸರ್ಕಾರವೇ ಸೂಕ್ತ ಪ್ರಾಧಿಕಾರವಾಗಿರುವುದರಿಂದ ರಾಜ್ಯ ಸರ್ಕಾರದಿಂದ ವರದಿ ಕೇಳಲಾಗಿದೆ.
ಅದೇ ಸಮಯದಲ್ಲಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ವಾಸ್ತವಿಕ ವರದಿಯನ್ನು ಒದಗಿಸುವಂತೆ ಪ್ರಾದೇಶಿಕ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಗೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು. ಖ್ಯಾತ ಸುದ್ದಿಸಂಸ್ಥೆ ರಾಯ್ಟರ್ಸ್ ತನ್ನ ತನಿಖಾ ವರದಿಯಲ್ಲಿ ಈ ಅಂಶವನ್ನು ಬಯಲಿಗೆ ಎಳೆದಿತ್ತು. ಮದುವೆಯಾದ ಬಳಿಕ ಗರ್ಭ ಧರಿಸುವುದು, ಮಗು ಮಾಡಿಕೊಳ್ಳುವುದು ಇತ್ಯಾದಿ ಕಾರಣಕ್ಕೆ ಮಹಿಳೆಯರ ಕೆಲಸಕ್ಕೆ ಗೈರಾಗುತ್ತಾರೆ ಎಂಬ ಕಾರಣಕ್ಕೆ ಅವರ ನೇಮಕಾತಿ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.
ಫಾಕ್ಸ್ಕಾನ್ನ ಮಾಜಿ ಎಚ್ಆರ್ ಎಕ್ಸಿಕ್ಯೂಟಿವ್ ಎಸ್ ಪೌಲ್ ಎಂಬುವವರೂ ಐಫೋನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು (married women) ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವುದು ಹಾಗೂ ಇತರ ಕೆಲ ನಿರ್ಬಂಧಗಳು ಇರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫಾಕ್ಸ್ಕಾನ್ನ ಮಾಜಿ ಎಚ್ಆರ್ ಎಕ್ಸಿಕ್ಯೂಟಿವ್ ಎಸ್ ಪೌಲ್ ಅವರು ಮಾತ್ರವಲ್ಲ, ಇನ್ನೂ ಕೆಲ ಮಾಜಿ ಉದ್ಯೋಗಿಗಳು ಈ ನಿರ್ಬಂಧ ಇರುವುದನ್ನು ದೃಢಪಡಿಸಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ಹೇಳಿದೆ.
ಅಂದಹಾಗೆ ತೈವಾನ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಚೆನ್ನೈ ಬಳಿಯ ಶ್ರೀಪೆರಂಬದೂರಿನಲ್ಲಿರುವ ತನ್ನ ಕಾರ್ಖಾನೆಯಲ್ಲಿ Apple ಗಾಗಿ ಐಫೋನ್‌ಗಳನ್ನು ಉತ್ಪಾದಿಸುತ್ತದೆ.
Advertisement