
ಪಾಟ್ನಾ: ಯುವತಿಯೊಬ್ಬಳು ತಮ್ಮ ಮನೆಯ ಟೆರೆಸ್ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆ ವರದಿಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬಿಹಾರದ ಸೀತಾಮರ್ಹಿಯಲ್ಲಿ ಈ ಘಟನೆ ನಡೆದಿದ್ದು, ಮಳೆ ನಡುವೆಯೇ ಮನೆಯ ಟೆರೆಸ್ ಮೇಲೆ ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದ ವೇಳೆ ಮನೆಯ ಮೇಲ್ಛಾವಣಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿಯುತ್ತಲೇ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.
ಯುವತಿ ರೀಲ್ಸ್ ಮಾಡಲು ಇಟ್ಟಿದ್ದ ಮೊಬೈಲ್ ನಲ್ಲೇ ಈ ವಿಡಿಯೋ ದಾಖಲಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಈ ವಿಡಿಯೋ ಪ್ರಕೃತಿ ಎದುರು ಮತ್ತು ಮಳೆ ಸಂದರ್ಭದಲ್ಲಿ ಹುಚ್ಚಾಟಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡಿದಂತಿದೆ.
ಇನ್ನು ಯುವತಿ ಹುಚ್ಚಾಟವನ್ನು ಕೆಲವರು ಟೀಕಿಸಿದ್ದರೆ, ಮತ್ತೆ ಕೆಲವರು ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ನಿಟ್ಟಿಸಿರು ಬಿಟ್ಟಿದ್ದಾರೆ. ಮತ್ತೆ ಕೆಲವರು ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ರೀಲ್ಸ್, ಶೂಟಿಂಗ್ ನಂತಹ ಹುಚ್ಚಾಟಗಳು ಅಪಾಯ.. ಮಾಡಬೇಡಿ ಎಂದು ಕೆಲವರು ಕಿವಿಮಾತು ಹೇಳಿದ್ದಾರೆ.
Advertisement